ಚಿಕ್ಕಮಗಳೂರು : ಈ ಬಾರಿ ರಾಜ್ಯ ಸರ್ಕಾರವೇ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಬೇಕೆಂದು ಖಾಸಗಿ ಅನುದಾನ ರಹಿತ ಶಾಲೆಗಳ ಸಂಘದಿಂದ ಸರ್ಕಾರಕ್ಕೆ ಒತ್ತಾಯ…

152
firstsuddi

ಚಿಕ್ಕಮಗಳೂರು : ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಈ ಬಾರಿ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ನಗರದಲ್ಲಿ ನಡೆದ ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘದ ಸಭೆ ಕೈಗೊಂಡಿದೆ.
ನಗರದ ಮಾಡೆಲ್ ಇಂಗ್ಲೀಷ್ ಶಾಲೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು ಲಾಕ್‍ಡೌನ್‍ನಿಂದಾಗಿ ಖಾಸಗಿ ಶಾಲೆಗಳನ್ನು ನಡೆಸುವುದೇ ಕಷ್ಟವಾಗಿದೆ, ಶಿಕ್ಷಕರು ಮತ್ತು ಸಿಬ್ಬಂಧಿಗಳಿಗೆ ವೇತನ ನೀಡುವುದೂ ಸಹ ದುಸ್ತರವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯ ಸರ್ಕಾರವೇ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.
ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆಯಾದ ಕ್ಯಾಂಪ್ಸ್‍ನೊಂದಿಗೆ ಮುಂದಿನ ದಿನಗಳಲ್ಲಿ ಸಂಘ ಕೈಜೋಡಿಸುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಜಿಲ್ಲೆಯಲ್ಲಿರುವ ಬೇರೆ ಯಾವುದೇ ಸಂಸ್ಥೆಗಳೊಂದಿಗೆ ಖಾಸಗಿ ಶಾಲೆಗಳು ವ್ಯವಹರಿಸಬಾರದು ಎಂದು ನಿರ್ಣಯಿಸಲಾಯಿತು.
ಸಂಘದ ಅಧ್ಯಕ್ಷ ಬಿ.ಹೆಚ್.ನರೇಂದ್ರ ಪೈ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷರಾದ ರಿಜ್ವಾನ ಪರ್ವೀಜ್, ಕೆ.ಎಸ್.ರಮೇಶ್, ಶಂಕರ ವಿದ್ಯಾ ಮಂದಿರದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಡೆಲ್ ಇಂಗ್ಲೀಷ್ ಶಾಲೆಯ ಸಂಸ್ಥಾಪಕ ಎಂ.ಎನ್.ಷಡಕ್ಷರಿ, ಜ್ಞಾನರಶ್ಮಿ ಶಾಲೆಯ ಕಾರ್ಯದರ್ಶಿ ನಂದಕುಮಾರ್, ಮಹಮದ್ ಗೌಸ್, ಸಿ.ಹೆಚ್.ಶ್ರೀನಿವಾಸ್ ಸಭೆಯಲ್ಲಿ ಪಾಲ್ಗೊಂಡಿದ್ದರು.