ಚಿಕ್ಕಮಗಳೂರು : ಕಾಂಗ್ರೆಸ್ ಪಕ್ಷದಲ್ಲಿದ್ದರೆ ಸಂಭಾವಿತ, ಪಾರ್ಟಿ ಬಿಟ್ಟರೆ ಕ್ರಿಮಿನಲ್ಲಾ : ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ವಾಗ್ದಾಳಿ…

196
firstsuddi

ಚಿಕ್ಕಮಗಳೂರು : ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಕ್ರಿಮಿನಲ್ ಹಿನ್ನೆಲೆ ಉಳ್ಳವರು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಚಿವ ಸಿ.ಟಿ. ರವಿ ಅವರು ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಅವರು ಕ್ರಿಮಿನಲ್ ಹಿನ್ನೆಲೆ ಉಳ್ಳವರು ಎಂದು ನಿನ್ನೆ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹಾಗಾದರೆ ಎರಡು ಬಾರಿ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಿದ ಪಾರ್ಟಿ ಯಾವುದು? ಅವರ ಪಕ್ಷದಲ್ಲಿದ್ದರೆ ಸಂಭಾವಿತ, ಪಾರ್ಟಿ ಬಿಟ್ಟರೆ ಕ್ರಿಮಿನಲ್ಲಾ ಎಂದು ಪ್ರಶ್ನಿಸಿದ್ದಾರೆ.
2018ರ ಚುನಾವಣೆ ವೇಳೆ ಮುನಿರತ್ನ ಇಂದ್ರ, ಚಂದ್ರ, ದೇವೇಂದ್ರ ಎಂದು ಹೇಳಿದ್ದರು. ಈಗ ಮುನಿರತ್ನ ಪಾರ್ಟಿ ಬಿಟ್ಟ ಕೂಡಲೇ ಬದಲಾಗುತ್ತಾರ..? ಮುನಿರತ್ನ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಪರ ಪ್ರಚಾರ ಮಾಡಿರುವ ಸ್ವಲ್ಪ ಹಳೆಯ ವೀಡಿಯೋಗಳನ್ನು ತೆಗೆದು ನೋಡಿ ಎಂದು ಕಿಡಿಕಾರಿದರು.
ಡಿ.ಕೆ. ಶಿವಕುಮಾರ್ ಅವರು ಮುಂಬೈಗೆ ಹೋಗಿದ್ದಲ್ಲಾ…ಏನಕ್ಕೆ ಹೋಗಿದ್ದರು? ಶಾಸಕರ ಮನವೊಲಿಸಿ ಕರೆದುಕೊಂಡು ಬರುತ್ತೇನೆ ಎಂದು ತಾನೇ ಹೈಡ್ರಾಮ ಮಾಡಿ ಮುಂಬೈಯಲ್ಲಿ ನಿಂತಿದ್ದು. ಇವರು ಸರಿ ಇಲ್ಲ ಅನ್ನೋದಾದರೆ ಕರೆತರಲು ಯಾಕೆ ಹೋಗಿದ್ದರು. ಎಲ್ಲಾ ಒಪ್ಪಿದ್ದಾರೆ, ನಿಮ್ಮನ್ನೇ ಮಂತ್ರಿ ಮಾಡುತ್ತೇವೆ ಬನ್ನಿ ಎಂದು ಸಿದ್ದರಾಮಯ್ಯ ಅವರು ಯಾಕೆ ಹೇಳಿದ್ದರು. ಇದೀಗ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.