ಚಿಕ್ಕಮಗಳೂರು : ಸಾಲ ವಸೂಲಾತಿ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರ ಆಸ್ತಿ ಹರಾಜಿಗೆ ಮುಂದಾಗಿರುವ ಬ್ಯಾಂಕ್‍ಗಳ ಕ್ರಮವನ್ನು ವಿರೋಧಿಸಿ ಕೆಜಿಎಫ್ ಸೇರಿದಂತೆ ಬೆಳೆಗಾರರ ವಿವಿಧ ಸಂಘಟನೆಗಳು ನಗರದಲ್ಲಿ ಇಂದು ಮಳೆಯ ನಡುವೆ ಪ್ರತಿಭಟನೆ ನಡೆಸಿದವು.
ಕರ್ನಾಟಕ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಆಜಾದ್ ಪಾರ್ಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ಬ್ಯಾಂಕ್‍ಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಗಳ ಮುಖಂಡರು ಆಸ್ತಿ ಹರಾಜು ಪ್ರಕ್ರಿಯೆಯನ್ನು ತಕ್ಷಣ ಕೈ ಬಿಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಜಿಎಫ್ ಉಪಾಧ್ಯಕ್ಷ ಡಿ.ಎಂ.ವಿಜಯ್ ಕಳೆದ 8-10 ವರ್ಷಗಳಿಂದ ಕಾಫಿ ಬೆಳೆಗಾರರು ಅತ್ಯಂತ ಸಂಕಷ್ಟದಲ್ಲಿದ್ದಾರೆ, ಅತಿವೃಷ್ಠಿ, ಅನಾವೃಷ್ಠಿ, ಬೆಲೆ ಕುಸಿತ, ಬೆಳೆ ಕುಂಠಿತ, ಗಿಡಗಳಿಗೆ ರೋಗಭಾದೆ, ಕಾರ್ಮಿಕರ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಂದ ಜರ್ಝರಿತರಾಗಿದ್ದಾರೆ ಎಂದರು.
26 ವರ್ಷಗಳ ಹಿಂದಿದ್ದ ಕನಿಷ್ಠ ಬೆಲೆ ಕಾಫಿ ಬೆಳೆಗೆ ಇದೀಗ ಬಂದಿದೆ, ಕೇಂದ್ರ ಸರ್ಕಾರ ಹೊರ ದೇಶಗಳಿಂದ ಕಾಳು ಮೆಣಸನ್ನು ಆಮದು ಮಾಡಿಕೊಳ್ಳುವ ಮೂಲಕ ದೇಶೀಯ ಮೆಣಸಿಗೆ ಬೆಲೆ ಇಲ್ಲದಂತೆ ಮಾಡಿದೆ, ಇದರಿಂದಾಗಿ ಕಾಫಿ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಮನೆಯ ಒಡವೆಯನ್ನು ಅಡವಿಟ್ಟು ಸಾಲ ನವೀಕರಣವನ್ನು ಮಾಡಿಕೊಳ್ಳುತ್ತಿದ್ದಾರೆ, ಇದರ ಜೊತೆಗೆ ತೋಟಗಳ ನಿರ್ವಹಣೆ ದುಬಾರಿಯಾಗಿದೆ ಹಾಗಾಗಿ ಬೆಳೆಗಾರರು ಸಾಲ ಕಟ್ಟುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರು.
ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವರಿಕೆ ಮಾಡಿಕೊಡಲಾಗಿದೆ. ಸಮಸ್ಯೆಗೆ ಸ್ಪಂದಿಸುವ ಭರವಸೆ ಇದೀಗಷ್ಟೇ ದೊರೆತಿದೆ, ಅದರ ನಡುವೆ ಸಂಯಮದಿಂದ ಇರಬೇಕಾಗಿದ್ದ ಬ್ಯಾಂಕ್ ಅಧಿಕಾರಿಗಳು ಏಕಾಏಕಿ ಬೆಳೆಗಾರರಿಗೆ ನೋಟೀಸ್ ನೀಡಿ ಅವರ ಆಸ್ತಿ ಹರಾಜಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಆಸ್ತಿ ಹರಾಜು ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ ವಿಜಯ್ ಇಲ್ಲದಿದ್ದಲ್ಲಿ ಬ್ಯಾಂಕ್‍ಗಳ ಮುಂದೆ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎ.ಸುರೇಶ್ ಮಾತನಾಡಿ ಕಾಂಡಕೊರಕದಿಂದಾಗಿ ತೋಟಗಳನ್ನೇ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿರುವ ಬೆಳೆಗಾರರ ಆಸ್ತಿ ಹರಾಜು ಪ್ರಕ್ರಿಯೆಯನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಎಸ್.ಮುರಳೀಧರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಿಗೆ ಧಾವಿಸದಿದ್ದಲ್ಲಿ ಕಾಫಿ ಉದ್ಯಮದ ಅವಸಾನವಾಗುತ್ತದೆ, ಅದನ್ನೆ ನಂಬಿರುವ ಬೆಳೆಗಾರರ ಮತ್ತು ಕಾರ್ಮಿಕರ ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ಎಚ್ಚರಿಸಿದರು.
ಪ್ರತಿಭಟನೆ ನಂತರ ಕಾರ್ಪೋರೇಷನ್ ಬ್ಯಾಂಕ್. ಲೀಡ್ ಬ್ಯಾಂಕ್ ಮತ್ತು ಅಪರ ಜಿಲ್ಲಾಧಿಕಾರಿ ಡಾ|| ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕೆಜಿಎಫ್ ಸಂಘಟನಾ ಕಾರ್ಯದರ್ಶಿ ರೇವಣ್ಣಗೌಡ, ಆಲ್ದೂರು ಬೆಳೆಗಾರರ ಸಂಘದ ಕಾರ್ಯದರ್ಶಿ ಹೆಚ್.ಇ.ಲವ, ವಸ್ತಾರೆ ಸಂಘದ ಕಾರ್ಯದರ್ಶಿ ರತೀಶ್, ಟಿ.ಬಿ.ನರೇಂದ್ರ, ಪುಟ್ಟಣ್ಣ, ಅರೇನಳ್ಳಿ ಪ್ರಕಾಶ್, ಸಿ.ಸಿ. ಈರೇಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಕಾಫಿ ಬೆಳೆಗಾರರ ಆಸ್ತಿ ಹರಾಜಿಗೆ ಮುಂದಾಗಿರುವ ಬ್ಯಾಂಕ್‍ಗಳ ಕ್ರಮವನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ...










