ಚಿಕ್ಕಮಗಳೂರು : ಟೀಮೆಂಟ್ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಸಿಗದಾಳು ಘಾಟಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದವರು ಕೊಪ್ಪ ತಾಲೂಕಿನ ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತಮೇಶ್ವ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ. 55 ವರ್ಷದ ಬಾಬಣ್ಣ, 32 ವರ್ಷದ ಶೈಲಾ, 11 ವರ್ಷದ ಮೊಮ್ಮಗಳು ಅನನ್ಯ ಆತ್ಮಹತ್ಯೆಗೆ ಯತ್ನಿಸಿದವರು. ಸಿಗದಾಳು ಗ್ರಾಮದಿಂದ ಸುಮಾರು 8-10 ಕಿ.ಮೀ. ದೂರದ ಘಾಟಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಕೀಟನಾಶಕ ಔಷಧಿಯನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳಿಯರು ಕಾಡಿಗೆ ಹೋದಾಗ ಟಿಮೇಟ್ ಸೇವಿಸಿ ಬಿದ್ದು ನರಳಾಡುತ್ತಿರುವುದನ್ನು ಕಂಡು ಹರಿಹರಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಹರಿಹರಪುರ ಪೊಲೀಸರು ಸ್ಥಳಿಯರ ಸಹಾಯದಿಂದ ಮೂವರನ್ನು ಕೊಪ್ಪ ಸಾರ್ವಜನಿಕ ಆಸ್ವತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ಮಣಿಪಾಲ್ ಆಸ್ವತ್ರೆಗೆ ರವಾನಿಸಲಾಗಿದೆ. ಆದರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆಗೆ ಯತ್ನಿಸಿರುವ ಬಾಬಣ್ಣ ಎಂಬುವರು ಕೊಪ್ಪದ ಹುಲ್ಲುಮಕ್ಕಿಯಲ್ಲಿ ವಾಸವಿದ್ದರು. ಆ ಮನೆಯನ್ನು ಮಾರಾಟ ಮಾಡಿ ಉತ್ತಮೇಶ್ವರ ಗ್ರಾಮದಲ್ಲಿ ಜಮೀನು ಖರೀದಿಸಿ ವಾಸವಿದ್ದರು ಎಂದು ತಿಳಿದು ಬಂದಿದೆ. ಆದರೆ, ಮಗಳು, ಮೊಮ್ಮಗಳ ಜೊತೆ ಆತ್ಮಹತ್ಯೆಗೆ ಯತ್ನಿಸಿರುವುದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಹರಿಹರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










