ಚಿಕ್ಕಮಗಳೂರು : ಕುವೆಂಪು ಅವರು ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು-ಪ್ರದೀಪ್ ಕೆಂಜಿಗೆ

184
firstsuddi

ಚಿಕ್ಕಮಗಳೂರು : ರಾಷ್ಟ್ರಕವಿ ಕುವೆಂಪು ಅವರು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತರಾಗದೆ ವಿಜ್ಞಾನ ಸೇರಿದಂತೆ ಎಲ್ಲಾ ರಂಗಗಳಲ್ಲೂ ಪರಿಣತಿ ಸಾಧಿಸಿದ್ದರು ಎಂದು ಲೇಖಕ ಪ್ರದೀಪ್ ಕೆಂಜಿಗೆ ಅವರು ಹೇಳಿದರು.
ಜಿಲ್ಲಾ ಕಸಾಪ ನಗರದ ಜೆವಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆ ಹಾಗೂ ಹಳಸೇ ಭೈರೇಗೌಡ ಮತ್ತು ಯಶೋಧಮ್ಮ ಐ.ಎಂ.ಸಣ್ಣತಮ್ಮೇಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರು ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು. ಸಾಹಿತ್ಯದ ಜೊತೆಗೆ ಮನೋವಿಜ್ಞಾನ, ಖಗೋಳ ಶಾಸ್ತ್ರ ಮತ್ತು ಡಾರ್ವಿನ್‍ನ ಥಿಯರಿ ಬಗ್ಗೆಯೂ ಆಳವಾದ ಅಧ್ಯಯನ ಮಾಡಿದ್ದರು, ಅವುಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತಿದ್ದರು ಎಂದರು.
ಕುವೆಂಪು ರಾಮಾಯಣ ದರ್ಶನಂ ಮತ್ತು ಪ್ರತಿ ಸಂಸ್ಕೃತಿ ವಿಷಯ ಕುರಿತು ಉಪನ್ಯಾಸ ನೀಡಿದ ವಿಮರ್ಶಕ ಡಾ|| ಹೆಚ್.ಎಸ್.ಸತ್ಯನಾರಾಯಣ ಕುವೆಂಪು ಅವರ ಸಾಹಿತ್ಯವನ್ನು ನೋಡಿದರೆ ಅವರು ನಾಸ್ತಿಕರು ಎಂಬ ಭಾವನೆ ಬರುವುದು ಸಹಜ, ಅದರೆ ಅದು ತಪ್ಪು, ಅವರಿಗೆ ದೇವರಲ್ಲಿ ಆಗಾಧವಾದ ನಂಬಿಕೆಯಿತ್ತು ಎಂದು ತಿಳಿಸಿದರು.
ಕುವೆಂಪು ಅವರಲ್ಲಿ ವೈಚಾರಿಕತೆಯೂ ಇತ್ತು, ಆಧ್ಯಾತ್ಮವೂ ಇತ್ತು ಅದಕ್ಕೆ ಸಾಕ್ಷಿ ತೃಣಮಪಿ ನ ಚಲತಿ ತೇನವಿನ ಎಂಬ ಅವರ ಕವನ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಅವರು ಕುವೆಂಪು ಅವರ ಸಾಹಿತ್ಯ ಸಾಗರವಿದ್ದ ಹಾಗೆ ಅವುಗಳನ್ನು ಪೂರ್ತಿಯಾಗಿ ಓದಲು ಸಾಧ್ಯವಾಗದಿದ್ದರೂ ಕೆಲವು ಕೃತಿಗಳನ್ನಾದರೂ ನಾವು ಅಧ್ಯಯನ ಮಾಡಬೇಕು ಎಂದು ಸಲಹೆ ಮಾಡಿದರು.

ವಿಶ್ವಮಾನವ ದಿನಾಚರಣೆ ಪ್ರಯುಕ್ತ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವನ್ನು ಬಿಡುಗಡೆ ಮಾಡಲಾಯಿತು, ಇತ್ತೀಚೆಗೆ ನಿಧನರಾದ ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಸಮಾರಂಭದ ನಡುವೆ ಗಾಯಕ ಚಂದ್ರಶೆಟ್ಟಿ ಅವರಿಂದ ಕುವೆಂಪು ವಿರಚಿತ ಗೀತೆಗಳ ಗಾಯನ ನಡೆಯಿತು. ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಐ.ಎಸ್.ಉಮೇಶ್‍ಚಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜೇಗೌಡ, ದತ್ತಿದಾನಿ ಹಳಸೆ ಶಿವಣ್ಣ, ಜೆವಿಎಸ್ ಶಾಲೆಯ ಕಾರ್ಯನಿರ್ವಹಣಾಧಿಕಾರಿ ಕುಳ್ಳೇಗೌಡ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಶಿಕ್ಷಕರಾದ ಜ್ಞಾನಮೂರ್ತಿ, ಶಂಕರೇಗೌಡ ಉಪಸ್ಥಿತರಿದ್ದರು.