ಚಿಕ್ಕಮಗಳೂರು. : ನಾಡೋಜ ಡಾ.ಹೆಚ್.ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದ ಜಿಲ್ಲೆಯ ಹಿರಿಯ ವೀರಗಾಸೆ ಕಲಾವಿದ ಎಂ.ಅರ್.ಬಸಪ್ಪ ಅವರನ್ನು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಆತ್ಮೀಯವಾಗಿ ಅಭಿನಂದಿಸಿತು.
ಅಜ್ಜಂಪುರ ತಾಲೂಕಿನ ಮಾಳೇನಹಳ್ಳಿಯ ಅವರ ನಿವಾಸಕ್ಕೆ ತೆರಳಿದ ಪರಿಷತ್ತಿನ ಪದಾಧಿಕಾರಿಗಳು ಬಸಪ್ಪ ದಂಪತಿಯನ್ನು ಸನ್ಮಾನಿಸಿ ಗೌರವ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲಾವಿದ ಬಸಪ್ಪ, ರಾಷ್ಟ್ರೀಯ ಪುರಸ್ಕಾರ ದೊರೆತಿರುವುದು ತಮಗೆ ಸಂತಸ ಮತ್ತು ಹೆಮ್ಮೆ ತಂದಿದೆ. ಪ್ರಶಸ್ತಿಯಿಂದ ತಮ್ಮ ಉತ್ಸಾಹ ಇಮ್ಮಡಿಯಾಗಿದೆ ಎಂದರು.
ಅಧುನಿಕತೆಯ ಭರದಲ್ಲಿ ಕಣ್ಮರೆಯಾಗುತ್ತಿರುವ ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಉಳಿಯಬೇಕಾದರೆ ಗ್ರಾಮೀಣ ಪ್ರದೇಶಗಳಲ್ಲಿ ಎಲೆಮರೆಕಾಯಿಯಂತೆ ಬದುಕುತ್ತಿರುವ ಜಾನಪದ ಕಲಾವಿದರನ್ನು ಸಮಾಜ ಗುರುತಿಸಿ ಗೌರವಿಸಬೇಕು ಎಂದು ಸಲಹೆ ಮಾಡಿದರು.
ಜಾನಪದ ನಮ್ಮ ಸಂಸ್ಕೃತಿಯ ಮೂಲಬೇರು ಅದು ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದ ಅವರು ಜಾನಪದ ಮುಂದಿನ ತಲೆಮಾರಿಗೆ ಉಳಿಯಬೇಕಾದರೆ ನಗರ ಪ್ರದೇಶದ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಯ ಗೀಳಿನಿಂದ ಹೊರಬಂದು ಅದನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ಹಿರಿಯ ಕಲಾವಿದ ಬಸಪ್ಪ ಅವರಿಗೆ ರಾಷ್ಟ್ರೀಯ ಪುರಸ್ಕಾರ ದೊರೆತಿರುವುದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ತರೀಕೆರೆ ತಾಲೂಕು ಅಧ್ಯಕ್ಷ ಹರೀಶ್, ಪದಾಧಿಕಾರಿಗಳಾದ ನಿಂಗಪ್ಪ, ಸಿದ್ದಪ್ಪ, ಲೋಹಿತ್, ಎಂ.ಬಿ.ರಾಜಪ್ಪ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು. : ಜಾನಪದ ನಮ್ಮ ಸಂಸ್ಕೃತಿಯ ಮೂಲಬೇರು ಅದು ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ...










