ಚಿಕ್ಕಮಗಳೂರು : ಜಾನಪದ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಚಟ್ನಳ್ಳಿ ಮಹೇಶ್ ಆಯ್ಕೆ…

114
firstsuddi

ಚಿಕ್ಕಮಗಳೂರು : ಕಡೂರು ತಾಲ್ಲೂಕಿನ ಯಗಟಿಪುರದಲ್ಲಿ ಜೂ.25 ರಂದು ತಾಲ್ಲೂಕು ಮಟ್ಟದ ಪ್ರಥಮ ಜಾನಪದ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರನ್ನಾಗಿ ಸಾಹಿತಿ ಚಟ್ನಳ್ಳಿ ಮಹೇಶ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಡೂರಿನ ವಾಸವಿ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದಿಂದ ಇತ್ತೀಚೆಗೆ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಜೂ.25 ರಂದು ಕಡೂರು ಶಾಸಕ ಬೆಳ್ಳಿಪ್ರಕಾಶ್ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಸಮ್ಮೇಳನದ ಸಿದ್ದತೆ ಈಗಾಗಲೇ ಭರದಿಂದ ಸಾಗಿದ್ದು, ಸಮ್ಮೇಳನದಲ್ಲಿ ತಾಲ್ಲೂಕಿನ ಹಿರಿಯ ಜಾನಪದ ಕಲಾವಿದರನ್ನು ಸನ್ಮಾನಿಸಲಾಗುವುದು, ವಿವಿಧ ಜಾನಪದ ಕಲಾ ತಂಡಗಳ ನಡುವೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಗ್ರಾಮದಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಜಾನಪದ ವಿಷಯ ಕುರಿತ ಗೋಷ್ಠಿಗಳು ಮತ್ತು ಜಾನಪದ ಗಾಯನ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ನಡೆಯಲಿವೆ ಎಂದು ತಿಳಿಸಿದರು.

ಹಿರಿಯ ವೀರಗಾಸೆ ಕಲಾವಿದ ಡಾ|| ಮಾಳೇನಹಳ್ಳಿ ಬಸಪ್ಪ. ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎ.ಎಂ.ಜಗದೀಶ್ವರಾಚಾರ್, ಪದಾಧಿಕಾರಿಗಳಾದ ನಾಗರಾಜ್, ರವಿಕುಮಾರ್, ಹಾಲೇಶ್, ತಿಪ್ಪೇಶ್, ಸಿದ್ದೇಶ್, ದೇವರಾಜ್, ಶ್ರೀನಿವಾಸಮೂರ್ತಿ, ಬಿ.ಪಿ.ದೇವಾನಂದ್ ಸಭೆಯಲ್ಲಿ ಪಾಲ್ಗೊಂಡಿದ್ದರು.