ಚಿಕ್ಕಮಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಬಿ.ಎಸ್.ಪಿ ಪಕ್ಷವನ್ನು ಕಾರ್ಯಕರ್ತರು ಬಲಪಡಿಸಬೇಕು : ಕೆ.ಟಿ.ರಾಧಾಕೃಷ್ಣ.

204
firstsuddi

ಚಿಕ್ಕಮಗಳೂರು : ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಬಹುಜನ ಸಮಾಜ ಪಕ್ಷವನ್ನು ಕಾರ್ಯಕರ್ತರು ಬಲಪಡಿಸಬೇಕು ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮನವಿ ಮಾಡಿದರು.
ಆರ್ಥಿಕ ಸಹಯೋಗ ದಿನದ ಅಂಗವಾಗಿ ನಗರದ ಬಿಎಸ್‍ಪಿ ಕಛೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪಕ್ಷದ ಬಲವರ್ಧನೆಗಾಗಿ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ದೇಶದಲ್ಲಿ ದಿನೇದಿನೇ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿದೆ, ಸಂವಿಧಾನದ ಆಶೆಯಗಳು ಮಣ್ಣು ಪಾಲಾಗುತ್ತಿವೆ ರಾಷ್ಟ್ರದಲ್ಲಿ ಪರೋಕ್ಷವಾಗಿ ತುರ್ತು ಪರಿಸ್ಥಿತಿ ಇದೆ ಎಂದು ವಿಷಾಧಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಬೇಕಾದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕನಸಾದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದೊರೆಯಬೇಕಾದರೆ ಅಕ್ಕ ಮಾಯಾವತಿ ದೇಶದ ಪ್ರಧಾನಿಯಾಗಬೇಕು ಹಾಗಾಗ ಬೇಕಾದರೆ ಬಹುಜನ ಸಮಾಜ ಪಕ್ಷ ಸದೃಢವಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು, ಆ ಪಕ್ಷಗಳ ಬಲವರ್ಧನೆಗೆ ಅಧಾನಿ ಅಂಬಾನಿಯಂತಹ ಉದ್ಯಮಿಗಳು ಕಾರ್ಪೋರೇಟ್ ಸಂಸ್ಥೆಗಳು ಹಣ ನೀಡುತ್ತವೆ. ಆದರೆ ಬಹುಜನ ಸಮಾಜ ಪಕ್ಷಕ್ಕೆ ಕಾರ್ಯಕರ್ತರೇ ಆಧಾರ ಸ್ತಂಭಗಳು ಹಾಗಾಗಿ ಒಂದು ನೋಟು ಒಂದು ಓಟು ತತ್ವದಡಿ ಕಾರ್ಯಕರ್ತರಿಂದ ಪಕ್ಷದ ಬಲವರ್ಧನೆಗೆ ಜಿಲ್ಲಾದ್ಯಂತ ನಿಧಿ ಸಂಗ್ರಹಿಸಿ ಅದನ್ನು ರಾಜ್ಯ ಸಮಿತಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ ಮಾತನಾಡಿ ಪಕ್ಷದ ಆರ್ಥಿಕ ಬಲವರ್ಧನೆಗಾಗಿ ಪ್ರತಿಯೊಬ್ಬ ಕಾರ್ಯಕರ್ತರೂ ನಿಧಿ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಗಂಗಾಧರ್ ಮಾತನಾಡಿ ಕಳೆದ ವರ್ಷ ಕಾರ್ಯಕರ್ತರಿಂದ 68 ಸಾವಿರ ರೂ ಸಂಗ್ರಹಿಸಿ ರಾಜ್ಯ ಸಮಿತಿಗೆ ಕಳುಹಿಸಲಾಗಿತ್ತು ಎಂದು ಹೇಳಿದರು.
ಬಿ.ಎಸ್.ಪಿ ತಾಲ್ಲೂಕು ಅಧ್ಯಕ್ಷ ಹರಿಶ್ ಮಿತ್ರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ.ಬಿ.ಸುಧಾ. ನಗರಾಧ್ಯಕ್ಷ ಹನುಮಂತರಾಯ ಜಿಲ್ಲಾ ಕಛೇರಿ ಕಾರ್ಯದರ್ಶಿ ಕೆ.ಆರ್. ಗಂಗಾಧರ್ ಪಕ್ಷದ ಮುಖಂಡರಾದ ವಸಂತ, ಸುರೇಶ್, ಕಲಾವತಿ, ಪುಷ್ಪ, ರೇಖಾ, ಲಕ್ಷ್ಮಣ್, ಸವಿತಾ, ಕೆ.ಎಸ್. ಮಂಜುಳ, ಉಪಸ್ಥಿತರಿದ್ದರು