ಚಿಕ್ಕಮಗಳೂರು : ಬೆಳೆಗೆ ಸಿಗದ ಬೆಲೆ – ಎರಡು ಎಕರೆ ಕೋಸ್ ಬೆಳೆ ನಾಶ ಮಾಡಿದ ರೈತ…

167
Firstsuddi

ಚಿಕ್ಕಮಗಳೂರು : ಈ ವರ್ಷದಲ್ಲಿ ಮೂರು ಬಾರಿ ಎಲೆ ಕೋಸ್ ಬೆಳೆ ಬೆಳೆದಿದ್ದು, ಮೂರ್ನಾಲ್ಕು ತಿಂಗಳು ನೀರಾಯಿಸಿ ಹಗಲಿರುಳು ಕಾದರೂ ಹಾಕಿದ ಬಂಡವಳವೂ ಬಂದಿಲ್ಲ. ಬರೀ ನಷ್ಟವೇ ಹೆಚ್ಚು ಎಂದು ಮನನೊಂದ ರೈತ ಭೂಮಿಗಾದರೂ ಗೊಬ್ಬರವಾಗಲೆಂದು ಎರಡು ಎಕರೆಯಲ್ಲಿ ಬೆಳೆದಿದ್ದ ಕೋಸಿಗೆ ಟ್ರ್ಯಾಕ್ಟರ್ ಹರಿಸಿ ನಾಶಮಾಡಿರುವ ಘಟನೆ ತಾಲ್ಲೂಕಿನ ಹಿರೇಗೌಜ ಗ್ರಾಮದಲ್ಲಿ ನಡೆದಿದೆ.

ರೈತ ಬಸವರಾಜ್ ಎರಡು ಎಕರೆ ಹೊಲದಲ್ಲಿ ಎಲೆಕೋಸ್ ಬೆಳೆದಿದ್ದರು. ಉತ್ತಮ ಫಸಲು ಕೂಡ ಬಂದಿತ್ತು. ಆದರೆ ಮಾರ್ಕೆಟ್ ಗೆ ತಂದರೆ 10 ಕೆ.ಜಿ.ಯ ಚೀಲಕ್ಕೆ 30 ರಿಂದ 40 ರೂಪಾಯಿಗೆ ಕೇಳುತ್ತಾರೆ. ಹೀಗಾಗಿ ರೈತ ಎರಡು ಎಕರೆ ಹೊಲದಲ್ಲಿ ಬೆಳೆದಿದ್ದ ಬೆಳೆಗೆ ಟ್ರ್ಯಾಕ್ಟರ್ ಹೊಡೆದು ನಾಶಪಡಿಸಿದ್ದಾರೆ. ಮೂರು- ನಾಲ್ಕು ತಿಂಗಳು ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗದೇ ಮನನೊಂದು ಹಾಕಿದ ಹಣ ಬರಲಿಲ್ಲ ಎಂದರು ಪರವಾಗಿಲ್ಲ, ಹೊಲಕ್ಕೆ ಗೊಬ್ಬರ ಆಗಲಿ ಎಂದು ರೈತ ಎರಡು ಎಕರೆ ಹೊಲದ ತುಂಬಾ ಟ್ರ್ಯಾಕ್ಟರ್ ಹೊಡೆಸಿ ಬೆಳೆ ನಾಶಮಾಡಿದ್ದಾರೆ. ಸರ್ಕಾರ ಬೆಲೆ ನಿಗದಿ ಮಾಡಿದರೆ ಬಡರೈತರಾದರೂ ಬದುಕುತ್ತಾರೆ ಎನ್ನುವುದು ಸ್ಥಳಿಯ ರೈತರ ಅಳಲಾಗಿದೆ.