ಚಿಕ್ಕಮಗಳೂರು : ಭಾರತ ಬಲಿಷ್ಠ ರಾಷ್ಟ್ರವಾಗಬೇಕಾದರೆ ದೇಶದ ಪ್ರಜೆಗಳೆಲ್ಲರೂ ಆರೋಗ್ಯವಂತರಾಗಬೇಕು : ಡಾ|| ಸಿ.ಮೋಹನ್ ಕುಮಾರ್ ಸಲಹೆ…

117
firstsuddi

ಚಿಕ್ಕಮಗಳೂರು : ಭಾರತ ಬಲಿಷ್ಠ ರಾಷ್ಟ್ರವಾಗಬೇಕಾದರೆ ದೇಶದ ಪ್ರಜೆಗಳೆಲ್ಲರೂ ಆರೋಗ್ಯವಂತರಾಗಬೇಕು ಎಂದು ಜಿಲ್ಲಾ ಸರ್ಜನ್ ಡಾ|| ಸಿ.ಮೋಹನ್ ಕುಮಾರ್ ಸಲಹೆ ಮಾಡಿದರು.

ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಶಾಲಾ ಸಪ್ತಾಹಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ನಾವು ಆರೋಗ್ಯವಂತರು ಮತ್ತು ದೈಹಿಕವಾಗಿ ಸಧೃಡರಾಗಬೇಕಾದರೆ ಉತ್ತಮ ಆಹಾರ, ಎಲ್ಲಾ ತರಕಾರಿ ಮತ್ತು ಹಣ್ಣುಗಳನ್ನೂ ಸೇವಿಸಬೇಕು, ಮನೆಯಲ್ಲಿ ಅಯೋಡಿನ್‍ಯುಕ್ತ ಉಪ್ಪನ್ನು ಬಳಸಬೇಕು, ರಕ್ತಹೀನತೆ ಉಂಟಾಗದಂತೆ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವೈದ್ಯರ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಪ್ರತಿದಿನ ವ್ಯಾಯಾಮ ಮಾಡಬೇಕು, ಬಿಸಿಲಿನಲ್ಲಿ ಆಟವಾಡಬೇಕು, ರಸ್ತೆ ಬದಿಯಲ್ಲಿ ದೊರೆಯುವ ಆಹಾರ ಪದಾರ್ಥಗಳನ್ನು ಹಾಗೂ ಜಂಕ್ ಫುಡ್‍ಗಳನ್ನು ಸೇವಿಸಬಾರದು ಎಂದು ಹೇಳಿದರು.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು, ಪ್ರತಿಯೊಬ್ಬರೂ ಕೋವಿಡ್ ಲಸಿಕೆಯನ್ನು ತಪ್ಪದೇ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿ ದೇಶದ ಜನತೆ ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಯುವಜನತೆಯನ್ನು ಆರೋಗ್ಯವಂತರನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಫಿಟ್ ಇಂಡಿಯಾ ಸಪ್ತಾಹವನ್ನು ನಡೆಸುತ್ತಿದೆ ಎಂದರು.

ನಾವು ಆರೋಗ್ಯವಂತರಾಗಿ ಮತ್ತು ದೈಹಿಕವಾಗಿ ಸಧೃಡರಾಗಬೇಕಾದರೆ ಉತ್ತಮ ಆಹಾರ ಸೇವಿಸುವುದರ ಜೊತೆಗೆ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಸಪ್ತಾಹದ ಅಂಗವಾಗಿ 7 ದಿನಗಳ ಕಾಲ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ನಡೆಸಲಾಗುವುದು, ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಶಿಕ್ಷಕರಾದ ನಾಗರಾಜ್, ನಾಗವೇಣಿ, ಜಯಂತಿ, ಸಾವಿತ್ರಿ ಉಪಸ್ಥಿತರಿದ್ದರು.