ಚಿಕ್ಕಮಗಳೂರು: ಕೃಷಿ ಜಮೀನಿನ ಸರ್ವೇ ನಡೆಸಿ ಸ್ಕೆಚ್ ತಯಾರಿಸಲು ₹10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಇಬ್ಬರು ಸರ್ವೇ ಅಧಿಕಾರಿಗಳು ₹2 ಲಕ್ಷ ಮುಂಗಡ ಹಣ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಸರ್ವೇಯರ್‌ಗಳಾದ ದೊರೆರಾಜ್ ಹಾಗೂ ರಂಗನಾಥ್ ಲೋಕಾಯುಕ್ತ ಬಲೆಗೆ ಬಿದ್ದವರು.
ಇಂದಾವರ ಗ್ರಾಮದ ಧರಣೇಶ್ ಎಂಬುವವರ ಕೃಷಿ ಜಮೀನಿನ ಸರ್ವೇ ನಡೆಸಿ ಸ್ಕೆಚ್ ತಯಾರಿಸಲು ₹10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಧರಣೇಶ್ ಅವರು ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ತಮ್ಮ ಖಾಸಗಿ ಕಚೇರಿಯಲ್ಲಿ ₹2 ಲಕ್ಷ ಮುಂಗಡ ಹಣ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಸರ್ವೇಯರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್ಪಿ ಪಿ. ತಿರುಮಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.










