ಚಿಕ್ಕಮಗಳೂರು : ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಷ್ಟ ಹಾಗೂ ಸವಾಲುಗಳನ್ನು ಎದುರಿಸುವ ಛಾತಿಯನ್ನು ಬೆಳೆಸಿಕೊಳ್ಳಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ಸಲಹೆ ಮಾಡಿದರು.
ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಪ್ರಸಕ್ತ ಸಾಲಿನ ಚಟುವಟಿಕೆಗಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕಷ್ಟಗಳು ಮತ್ತು ಸವಾಲುಗಳನ್ನು ಎದುರಿಸುವ ಛಾತಿಯನ್ನು ಬೆಳೆಸಿಕೊಳ್ಳದಿದ್ದಲ್ಲಿ ಬದುಕಿನಲ್ಲಿ ಮುಂದೆ ಬರಲು ಸಾಧ್ಯವಾಗುವುದಿಲ್ಲ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಗಣಿ ಹುಳದಂತೆ ಬದುಕಬಾರದು ಕ್ರಿಯಾಶೀಲ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು, ನನ್ನೊಬ್ಬನಿಂದ ಏನಾಗುತ್ತದೆ ಎಂಬ ಧೋರಣೆಯನ್ನು ಬಿಟ್ಟು ನನ್ನಿಂದ ಎಲ್ಲವೂ ಸಾಧ್ಯವಾಗುತ್ತದೆ ಎಂಬ ಆತ್ಮವಿಶ್ವಾಸ ದೊಂದಿಗೆ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಆಯುಕ್ತೆ ಡಿ.ಎಸ್.ಮಮತಾ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ವಿದ್ಯಾರ್ಥಿಗಳು ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು, ಬಡವರು, ಆಶಕ್ತರು ಮತ್ತು ಅಸಹಾಯಕರ ಸೇವೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ|| ಎಸ್.ಇ.ನಟರಾಜ್ ವಿದ್ಯಾರ್ಥಿಗಳು ಸ್ವಾರ್ಥ ಬಿಟ್ಟು ಸಮಾಜಕ್ಕಾಗಿ ಬದುಕುವುದನ್ನು ಕಲಿಯಬೇಕು ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ತರಬೇತಿ ಆಯುಕ್ತೆ ಸಂಧ್ಯಾರಾಣಿ, ಸಂಚಾಲಕ ಹೆಚ್.ಆರ್.ನವೀನ್ ಕುಮಾರ್, ರೇಂಜರ್ಸ್ನ ಸಂವಹನಾಧಿಕಾರಿ ಸುಹಾನಾ ಸುಲ್ತಾನ್, ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗಂಗಾಧರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಚ್ಚಿನ್ ಮತ್ತು ಚಂದನ ಕಾರ್ಯಕ್ರಮವನ್ನು ನಿರೂಪಿಸಿದರು, ರೋವರ್ಸ್ ತಂಡದ ನಾಯಕ ಯೋಗೀಶ್ ಸ್ವಾಗತಿಸಿದರು, ರೇಂಜರ್ಸ್ ನಾಯಕಿ ಗೀತಾಂಜಲಿ ವಂದಿಸಿದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಷ್ಟ ಹಾಗೂ ಸವಾಲುಗಳನ್ನು ಎದುರಿಸುವ ಛಾತಿಯನ್ನು ಬೆಳೆಸಿಕೊಳ್ಳಬೇಕು...










