ಚಿಕ್ಕಮಗಳೂರು : ಹಿರಿಯ ಸಾಹಿತಿ, ಪತ್ರಕರ್ತ, ಹೋರಾಟಗಾರ ನಾಡೋಜ ಪಾಟೀಲ್ ಪುಟ್ಟಪ್ಪ ಅವರಿಗೆ ನಗರದ ಸುವರ್ಣ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿತು.
ಪಾಪು ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು, ವಿವಿಧ ಪಕ್ಷ ಮತ್ತು ಸಂಘಟನೆಗಳ ಮುಖಂಡರು ಪಾಪು ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನುಡಿ ನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಹಿರಿಯ ಚೇತನ ಪಾಟೀಲ್ ಪುಟ್ಟಪ್ಪನವರು ನೂರು ವರ್ಷಗಳ ಕಾಲ ಕನ್ನಡದ ಧ್ವನಿಯಾಗಿದ್ದರು, ಸಾಹಿತಿಯಾಗಿ ಪತ್ರಕರ್ತರಾಗಿ ನಾಡು, ನುಡಿ, ನೆಲ ಜಲದ ಹೋರಾಟದಲ್ಲಿ ಭಾಗಿಯಾಗಿದ್ದರು ಎಂದರು.
ಪಾಪು ಅವರ ಸಾಹಿತ್ಯ, ಬರವಣಿಗೆ ಹರಿತವಾಗಿದ್ದವು, ಸರ್ಕಾರ ಎಚ್ಚೆತ್ತುಕೊಳ್ಳುವ ರೀತಿ ಅವರು ಮಾತಿನ ಚಾಟಿಯನ್ನು ಬೀಸುತ್ತಿದ್ದರು, ನಾಡು ನುಡಿ, ನೆಲ, ಜಲದ ರಕ್ಷಣೆ ವಿಚಾರದಲ್ಲಿ ಅವರು ಎಂದಿಗೂ ರಾಜಿಯಾಗುತ್ತಿರಲಿಲ್ಲ ಎಂದು ತಿಳಿಸಿದರು.
ಕರ್ನಾಟಕದ ಏಕೀಕರಣ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅಪ್ರತಿಮ ದೇಶಭಕ್ತ ಪಾಪು ಅವರ ನಡೆ, ನುಡಿ ಎಲ್ಲರಿಗೂ ಆದರ್ಶವಾಗಬೇಕು ಎಂದ ಅವರು ಸಾಹಿತ್ಯ ಮತ್ತು ಹೋರಾಟದ ಕೊಂಡಿ ಕಳಚಿರುವುದು ನಾಡಿನ ಬಹುದೊಡ್ಡ ದುರಂತ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ಪಾಪು ಅವರು ನಾಡು ಕಂಡ ಅಪ್ರತಿಮ ಹೋರಾಟಗಾರ ಎಂದು ಹೇಳಿದರು.
ರೈತ ಸಂಘದ ಮುಖಂಡ ಗುರುಶಾಂತಪ್ಪ ಮಾತನಾಡಿ ಪಾಟೀಲ್ ಪುಟ್ಟಪ್ಪನವರು ಕರ್ನಾಟಕದ ವಿಭಜನೆಯನ್ನು ಎಂದಿಗೂ ಸಹಿಸುತ್ತಿರಲಿಲ್ಲ ಎಂದು ತಿಳಿಸಿದರು.
ಸಿಪಿಐ ಮುಖಂಡ ಬಿ ಅಮ್ಜದ್ ಮಾತನಾಡಿ ವಾಸ್ತವವಾದಿ ಮತ್ತು ನಿಷ್ಠುರವಾದಿಯಾಗಿದ್ದ ಪಾಪು ಅವರ ನಿಧನದಿಂದ ನಾಡಿನ ಸಾಹಿತ್ಯ ಹಾಗೂ ಪತ್ರಿಕಾ ರಂಗಕ್ಕೆ ಆಘಾತವಾಗಿದೆ ಎಂದು ಹೇಳಿದರು.
ನ್ಯಾಯವಾದಿ ಅಬ್ದುಲ್ ಜಬ್ಬಾರ್, ಯುರೇಕಾ ಅಕಾಡಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ, ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್, ಜಾಗರ ಹೋಬಳಿ ಅಧ್ಯಕ್ಷ ರವಿ ಶ್ರೀನಿವಾಸ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಹಿರಿಯ ಸಾಹಿತಿ ನಾಡೋಜ ಪಾಟೀಲ್ ಪುಟ್ಟಪ್ಪ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್...










