ಚೇತನ್ ವೀಸಾ ರದ್ದತಿ ಬಗ್ಗೆ ನಟ ಕಿಶೋರ್ ಹೇಳಿದ್ದೇನು?

71
firstsuddi

ನಟ ಚೇತನ್ ಅವರ ವೀಸಾ ರದ್ದು ಮಾಡಿರುವ ಸರ್ಕಾರದ ನಡೆಯನ್ನು ನಟ ಕಿಶೋರ್ ಪ್ರಶ್ನಿಸಿದ್ದಾರೆ. ಈ ಕುರಿತು ನಟ ಕಿಶೋರ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

‘ಹಿಂದುತ್ವ ಅನ್ನುವ ಪದ ವರ್ತಮಾನದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅಲ್ಲ. ನಿಜವಾದ ಹಿಂದೂ ಧರ್ಮ, ಸಕಲರನ್ನೂ ಒಳಗೊಂಡ ವಸುಧೆಯೇ ಒಂದು ಕುಟುಂಬವೆಂದು ನೋಡುವ ವಿಶಾಲ ಮನಸ್ಥಿತಿ ಇರುವಂತಹದ್ದು’ ಎಂದಿದ್ದಾರೆ.

“ಹಿಂದುತ್ವ ಎನ್ನುವ ಪದ ಬಳಕೆಯಾಗುತ್ತಿರುವುದು ಒಂದು ಪಕ್ಷದ, ಒಂದು ಸಂಘದ, ಅಧಿಕಾರಕ್ಕಾಗಿ ಒಡೆದಾಳುವ, ಪರದ್ವೇಷದ, ಮೂಲಭೂತವಾದಿ ವೈದಿಕ ಸಂಪ್ರದಾಯದ ಸಂಕುಚಿತ ಪರಿಕಲ್ಪನೆಯಾಗಿದೆಯಷ್ಟೇ. ಹಾಗಾಗಿ ಈ ಜೀವ ವಿರೋಧಿ ರಾಜಕೀಯದ ಟೀಕೆಯಿಂದ ಹಿಂದೂಗಳಿಗೆಲ್ಲರಿಗೂ ಅಪಮಾನವಾಯಿತೆನ್ನುವುದು ಎಷ್ಟು ಉಚಿತ” ಎಂದು ಪ್ರಶಿಸಿದ್ದಾರೆ.

“ಹಾಗೆ ಅವಮಾನ ಪಡಲೇಬೇಕೆಂದರೆ ವೈದಿಕ ಪರಂಪರೆ ಇಂದಿಗೂ ಪ್ರತಿಪಾದಿಸುತ್ತಿರುವ ನಮ್ಮಲ್ಲೇ ಇರುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಲಿಂಗ ಬೇಧ ಇವುಗಳಿಂದಲ್ಲವೇ? ಆ ನಿಟ್ಟಿನಲ್ಲಿ ನಮ್ಮನ್ನು ನಾವು ತಿದ್ದಿಕೊಂಡು ಹಿಂದೂ ಧರ್ಮವನ್ನು ಎಲ್ಲರಿಗೂ ಮಾದರಿಯಾಗಿಸಬೇಕಲ್ಲವೇ? ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನಮ್ಮದೇ ಜನರನ್ನು ನಿಂದಿಸುವ, ಆರೋಪಿಸುವ, ಜೈಲಿಗೆ ಹಾಕುವ ಅಥವಾ ಗಡೀಪಾರು ಮಾಡುವ ಅತಿರೇಕಕ್ಕೆ ಹೋಗುವ ಬದಲು” ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.