ಜನತಾ ಜಲಧಾರೆಗೂ ಮುನ್ನ ತಂದೆ-ತಾಯಿ ಆಶೀರ್ವಾದ ಪಡೆದ ಹೆಚ್‍ಡಿಕೆ.

56
firstsuddi

ಬೆಂಗಳೂರು : ನಗರದ ಹೊರವಲಯದಲ್ಲಿ ಜೆಡಿಎಸ್ ನ ಮಹತ್ವಾಕಾಂಕ್ಷಿ ಜನತಾ ಜಲಧಾರೆ ಸಮಾರೋಪ ಸಮಾರಂಭ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಬರುವುದಕ್ಕೂ ಮುನ್ನ ಪದ್ಮನಾಭನಗರಕ್ಕೆ ತೆರಳಿದ ಹೆಚ್.ಡಿ. ಕುಮಾರಸ್ವಾಮಿ, ತಂದೆ ಹೆಚ್.ಡಿ. ದೇವೇಗೌಡ ಹಾಗೂ ತಾಯಿ ಚೆನ್ನಮ್ಮ ಅವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಇದಕ್ಕೂ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಶ್ರೀ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಾಮನಗರದಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಲಧಾರೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ಜಲಧಾರೆ ಉತ್ತಮವಾದ ಕಾರ್ಯಕ್ರಮ, ಕುಮಾರಸ್ವಾಮಿ ಅವರನ್ನು ಆಶೀರ್ವದಿಸೋಣ ಎಂದು ಚರ್ಚೆ ನಡೆಯುತ್ತಿದೆ ಎಂದರು.

ಜೆಡಿಎಸ್ ಪಕ್ಷ ಮುಳುಗ್ಹೋಯ್ತು, ಪಕ್ಷ ಚೇತರಿಸಿಕೊಳ್ಳಲ್ಲ ಎಂದು ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಜನತಾ ಜಲಧಾರೆ ಉತ್ತರ ಕೊಟ್ಟಿದೆ. ಜಲಧಾರೆಯಿಂದ ನನ್ನ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಬಂದಿದೆ. ಡಬಲ್ ಎನರ್ಜಿಯಿಂದ ಕಾರ್ಯಕರ್ತರು ಹೊರಟಿದ್ದಾರೆ. ಇವತ್ತು ಕನಿಷ್ಠ 4ರಿಂದ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತದೆ. ಜಲಧಾರೆ ಆರಂಭವಾದ ದಿನದಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ನಿರಂತರವಾಗಿ ಉತ್ತಮ ಮಳೆ ಬರುತ್ತಿರುವುದು ಶುಭ ಸೂಚಕ. ಇದು ನಮ್ಮ ಕಾರ್ಯಕರ್ತರಿಗೂ ಹುಮ್ಮಸ್ಸು ನೀಡಿದೆ ಎಂದರು.