ಜಮೀನಿಗೆ ರಸ್ತೆ ನಿರ್ಮಾಣ ವಿಚಾರ : ಯಶ್ ವಿರುದ್ಧ ಜಿಲ್ಲಾಡಳಿತಕ್ಕೆ ದೂರು…

146
Firstsuddi

ಹಾಸನ : ಜಿಲ್ಲೆಯ ದುದ್ದ ಹೋಬಳಿಗೆ ಸೇರಿದ ತಿಮ್ಮಲಾಪುರ ಗ್ರಾಮದ ಬಳಿ ಯಶ್ ಅವರು ಜಮೀನು ಖರೀದಿಸಿದ್ದು, ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ಯಶ್ ಅವರ ಪೋಷಕರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆ ನಡೆದಿತ್ತು. ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಣ್ಣಾಜಪ್ಪ ಅವರು ಇಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಚಿತ್ರ ನಟನಾದರೆ ಏನು ಬೇಕಾದರೂ ಮಾಡಬಹುದ? ರೈತರಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇವೆ ಎಂದು ಮಾಧ್ಯಮಗಳ ಮುಂದೆ ಹೇಳುವ ಅವರು, ತಮ್ಮ ಜಮೀನಿನ ಉಳಿವಿಗಾಗಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲು ಹೊರಟಿರುವುದು ಎಷ್ಟು ಸರಿ?. ರೈತರಿಗಾಗಿ ಏನನ್ನಾದರೂ ಮಾಡುತ್ತೇನೆ, ಜಮೀನು ಬೇಕಾದರೂ ಬಿಟ್ಟುಕೊಡುತ್ತೇನೆ ಎನ್ನುವ ಯಶ್ ಅವರು ಕಾಂಪೌಂಡ್ ನಿರ್ಮಿಸಿ ಇದೀಗ ರೈತರು ಸಂಚರಿಸಲು ದಾರಿ ಇಲ್ಲದಂತೆ ಮಾಡಿದ್ದಾರೆ. ದಾರಿ ಬಿಡುವಂತೆ ಮನವಿ ಮಾಡಿದರೂ ಒಪ್ಪಿಲ್ಲ. ಅಲ್ಲದೆ ಬಾಡಿಗೆ ಗೂಂಡಾಗಳನ್ನು ಬಿಟ್ಟು ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾರೆ ಎಂದು ಅಣ್ಣಾಜಪ್ಪ ಅವರು ಗಂಭೀರ ಆರೋಪ ಮಾಡಿದ್ದು, ಮುಂದೆ ರೈತರಿಗೆ ಯಾವ ತೊಂದರೆ ಆಗದಂತೆ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.