ಜಾಗತಿಕ ಸಿರಿಧಾನ್ಯ ಸಮ್ಮೇಳನ ಉದ್ಘಾಟಿಸಿದ ಮೋದಿ.

10
firstsuddi

ನವದೆಹಲಿ : ದೆಹಲಿಯಲ್ಲಿ ನಡೆಯುತ್ತಿರುವ ಸಿರಿಧಾನ್ಯಗಳ ಕುರಿತ ಎರಡು ದಿನಗಳ ಜಾಗತಿಕ ಸಮ್ಮೇಳನವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಹೈದರಾಬಾದ್ ಮೂಲದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮಿಲ್ಲೆಟ್ಸ್ ರಿಸರ್ಚ್ ಅನ್ನು ಜಾಗತಿಕ ಶ್ರೇಷ್ಠತೆಯ ಕೇಂದ್ರ ಎಂದು ಘೋಷಿಸುವುದರ ಜೊತೆಗೆ ಕೇಂದ್ರ ಸರ್ಕಾರ ‘ಶ್ರೀ ಅನ್ನ’ ಎಂದು ಹೆಸರಿಸಿದ ಸಿರಿಧಾನ್ಯಗಳ ಕುರಿತ ವಿಡಿಯೋವನ್ನು ಸಹ ಬಿಡುಗಡೆ ಮಾಡಲಾಯಿತು.

ಸಮ್ಮೇಳವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಮೋದಿ, ಭಾರತದ ಪ್ರಸ್ತಾವನೆ ಮತ್ತು ಪ್ರಯತ್ನಗಳ ನಂತರ, ವಿಶ್ವಸಂಸ್ಥೆಯು 2023 ಅನ್ನು ‘ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಿಸಿರುವುದು ದೇಶಕ್ಕೆ ಸಂದಿರುವ ಗೌರವದ ವಿಷಯವಾಗಿದೆ. ಆಹಾರ ಭದ್ರತೆ ಮತ್ತು ಆಹಾರ ಪದ್ಧತಿಯ ಸವಾಲುಗಳನ್ನು ನಿಭಾಯಿಸಲು ಸಿರಿಧಾನ್ಯ ಸಹಾಯ ಮಾಡುತ್ತದೆ ಎಂದರು.

ಸಿರಿಧಾನ್ಯ ಅಥವಾ ಶ್ರೀ ಅನ್ನವನ್ನು ಜಾಗತಿಕ ಆಂದೋಲನವಾಗಿ ಉತ್ತೇಜಿಸಲು ಭಾರತ ನಿರಂತರವಾಗಿ ಕೆಲಸ ಮಾಡುತ್ತಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳಿಲ್ಲದೆ ಸಿರಿಧಾನ್ಯವನ್ನು ಸುಲಭವಾಗಿ ಬೆಳೆಯಬಹುದು. ಭಾರತದ ಸಿರಿಧಾನ್ಯ ಮಿಷನ್ ದೇಶದ 2.5 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.

ಇಂದು ರಾಷ್ಟ್ರೀಯ ಆಹಾರ ಬುಟ್ಟಿಯಲ್ಲಿ ಸಿರಿಧಾನ್ಯಗಳು ಕೇವಲ 5-6 ಪ್ರತಿಶತವನ್ನು ಹೊಂದಿವೆ. ಭಾರತದ ವಿಜ್ಞಾನಿಗಳು ಮತ್ತು ಕೃಷಿ ತಜ್ಞರು ಈ ಪಾಲನ್ನು ಹೆಚ್ಚಿಸಲು ತ್ವರಿತವಾಗಿ ಕೆಲಸ ಮಾಡಲು ನಾನು ಒತ್ತಾಯಿಸುತ್ತೇನೆ. ಅದಕ್ಕಾಗಿ ನಾವು ಸಾಧಿಸಬಹುದಾದ ಗುರಿಗಳನ್ನು ಹೊಂದಿಸಬೇಕಾಗಿದೆ. ಸರ್ಕಾರವು ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ ಐ) ಯೋಜನೆಯನ್ನು ಪ್ರಾರಂಭಿಸಿದೆ. ಸಿರಿಧಾನ್ಯ ಆಧಾರಿತ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೋರಿದರು.