ಜೂನ್ 21ರಿಂದ ದೇಶದ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ : ಪ್ರಧಾನಿ ಮೋದಿ ಘೋಷಣೆ..!

90
firstsuddi

ನವದೆಹಲಿ : ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾದಿಂದಾಗಿ ನಮ್ಮ ಜೊತೆಗಿದ್ದ ಹಲವರನ್ನು ಕಳೆದುಕೊಂಡಿದ್ದೇವೆ. ಅಂತಹ ಕುಟುಂಬಗಳ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ಇದು 100 ವರ್ಷಗಳಲ್ಲಿಯೇ ಅತಿ ದೊಡ್ಡ ಮಹಾಮಾರಿ. ಇಂತಹ ಮಹಾಮಾರಿಯನ್ನು ಎಂದೂ ಕಂಡಿರಲಿಲ್ಲ. ಭಾರತ ಈ ಸಾಂಕ್ರಾಮಿಕ ರೋಗವನ್ನು ಹಲವು ಸ್ತರಗಳಲ್ಲಿ ಎದುರಿಸುತ್ತಿದೆ ಎಂದು ಹೇಳಿದ್ದಾರೆ.

ಲಸಿಕೆ ಈ ಮಹಾಮಾರಿಗೆ ಸಂಜೀವಿನಿ. ವಿಶ್ವದಲ್ಲಿ ಲಸಿಕೆ ಉತ್ಪಾದಿಸುವ ಕಂಪನಿಗಳು ಕಡಿಮೆ ಸಂಖ್ಯೆಯಲ್ಲಿವೆ. ಲಸಿಕೆಗೆ ಇಡೀ ವಿಶ್ವದಲ್ಲಿ ಬೇಡಿಕೆ ಹೆಚ್ಚಿವೆ. ಈ ಹಿಂದೆ ವ್ಯಾಕ್ಸಿನ್ ಗಾಗಿ ದಶಕಗಳವರೆಗೂ ಕಾಯಬೇಕಿತ್ತು. ವಿದೇಶದಲ್ಲಿ ಲಸಿಕೆ ಸಿಕ್ಕರೂ ನಮಗೆ ಸಿಗುತ್ತಿರಲಿಲ್ಲ. ಆದ್ರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಲಸಿಕೆ ಹಂಚಿಕೆಯಲ್ಲಿ ಭಾರತ ಮುಂದಿದೆ. ಮಿಷನ್ ಇಂದ್ರ ಧನುಷ್ ಯೋಜನೆ ಮೂಲಕ ಲಸಿಕೆ ನೀಡಲಾಗುತ್ತಿದೆ. ಇದುವರೆಗೂ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕೊರೊನಾ ಎರಡನೇ ಅಲೆಗೂ ಮುನ್ನವೇ ಭಾರತದಲ್ಲಿ ಲಸಿಕಾಕರಣ ಆರಂಭವಾಗಿತ್ತು.

ಕೇಂದ್ರ ಲಸಿಕೆ ನೀಡುವ ಕಾರ್ಯಕ್ರಮವನ್ನ ಕೇಂದ್ರಿಕರಣ ಮಾಡಿಕೊಳ್ಳುತ್ತಿದೆ ಎಂದು ಹಲವು ರಾಜ್ಯ ಸರ್ಕಾರಗಳು ಆರೋಪಿಸಿದವು. ಹಾಗಾಗಿ ಅವರಿಗೂ ಶೇ.50ರಷ್ಟು ಜವಾಬ್ದಾರಿಯನ್ನ ನೀಡಲಾಯ್ತು. ಮೇ ನಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕೆಲ ರಾಜ್ಯಗಳು ಮೊದಲಿನ ವ್ಯವಸ್ಥೆಯೇ ಚೆನ್ನಾಗಿತ್ತು ಎಂದು ಹೇಳಲಾರಂಭಿಸಿದವು. ಹಾಗಾಗಿ ಲಸಿಕೆಯ ಪೂರ್ಣ ಹಂಚಿಕೆಯನ್ನ ಕೇಂದ್ರವೇ ತೆಗೆದುಕೊಳ್ಳಲಿದೆ. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಭಾರತ ಸರ್ಕಾರ ಕೊರೊನಾ ಲಸಿಕೆ ನೀಡಲಿದೆ. ಭಾರತ ಸರ್ಕಾರವೇ ಕೊರೊನಾ ಲಸಿಕೆ ಖರೀದಿಸಿ, ರಾಜ್ಯಗಳಿಗೆ ನೀಡಲಾಗುತ್ತದೆ. ಲಸಿಕೆಗಾಗಿ ರಾಜ್ಯಗಳು ಹಣ ನೀಡುವಂತಿಲ್ಲ. ಈ ಸಂಬಂಧ ಶೀಘ್ರವೇ ಮಾರ್ಗಸೂಚಿ ಪ್ರಕಟಿಸಲಾಗುವುದು.

ಖಾಸಗಿ ಆಸ್ಪತ್ರೆಗಳು ಶೇ.25ರಷ್ಟು ಲಸಿಕೆ ಖರೀದಿಸಬಹುದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ 150 ರೂಪಾಯಿ ಸೇವಾ ಶುಲ್ಕ ವಿಧಿಸಬಹುದಾಗಿದೆ. ಶೇ.75ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರ ಖರೀದಿಸಲಿದೆ ಎಂದು ಮೋದಿ ಪ್ರಕಟಿಸಿದರು.

ಜೂನ್ 21ರಿಂದ ದೇಶದ ಜನರಿಗೆ ಉಚಿತ ಲಸಿಕೆ ನೀಡಿಕೆ. ದೀಪಾವಳಿವರೆಗೂ ಅಂದ್ರೆ ನವೆಂಬರ್ ವರೆಗೆ ಬಡವರಿಗೆ ಉಚಿತವಾಗಿ ಆಹಾರ ಧಾನ್ಯ ನೀಡಲಾಗುವುದು ಎಂದು ಪ್ರಧಾನಿ ಘೋಷಣೆ ಮಾಡಿದರು.