ಡಬಲ್ ಎಂಜಿನ್ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ : ಮೋದಿ.

48
firstsuddi

ಮಂಗಳೂರು : ಡಬಲ್ ಎಂಜಿನ್ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಗೋಲ್ಡನ್ ಫಿಂಚ್ ಸಿಟಿ ಮೈದಾನದಲ್ಲಿ ಇಂದು 3,800 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಪ್ರಧಾನಿ ಭಾಷಣದ ಮುಖ್ಯಾಂಶಗಳು:
• ಮಂಗಳೂರು ಬಂದರಿನಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆಯಾಗಿದೆ. ಅದರ ಸಾಮರ್ಥ್ಯ ಮತ್ತು ದಕ್ಷತೆ ಎರಡೂ ವೃದ್ಧಿಯಾಗಿದೆ. ಕರ್ನಾಟಕ ಮತ್ತು ದೇಶಕ್ಕೆ ಇದರಿಂದ ದೊಡ್ಡ ಲಾಭ ಉಂಟಾಗಲಿದೆ.

• ಖಾದ್ಯ ತೈಲ, ಎಲ್ ಪಿಜಿ ಅನಿಲ ಆಮದು ವೆಚ್ಚ ಕೂಡ ಕಡಿಮೆಯಾಗಲಿದೆ. ಇಂದು ನಮ್ಮ ರಿಫೈನರಿ, ನದಿಯ ನೀರಿನಷ್ಟು ಸ್ವಾವಲಂಬಿಯಾಗಬೇಕಿದೆ. ಸಾಗರಮಾಲಾ ಯೋಜನೆಯಲ್ಲಿ ಬಹಳ ದೊಡ್ಡ ಲಾಭ ಪಡೆಯಲಿರುವ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ.

• ಇಂದು ಭಾರತವು ಮೂಲಸೌಕರ್ಯ ಅಭಿವೃದ್ಧಿಯ ಕಡೆಗೆ ಗಮನ ಹರಿಸಿದೆ. ಇದು ಅಭಿವೃದ್ಧಿ ಹೊಂದಿದ ಭಾರತಕ್ಕೆ ಹಾದಿ ಮಾಡಿಕೊಡಲಿದೆ. ಮೂಲಸೌಕರ್ಯ ಅಭಿವೃದ್ಧಿಗಳ ಮೂಲಕ ನಾವು ಹೊಸ ಉದ್ಯೋಗಗಳು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ತಿಳಿಸಿದರು.

• ಕರ್ನಾಟಕದಲ್ಲಿ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ನೀಡಲಾಗಿದೆ. ಮೀನುಗಾರರ ಆದಾಯವನ್ನು ಹೆಚ್ಚಿಸಲು ಅವರಿಗೆ ಉತ್ತಮ ದೋಣಿಗಳನ್ನು ಮತ್ತು ತಂತ್ರಜ್ಞಾನಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಕಳೆದ ಎಂಟು ವರ್ಷಗಳಲ್ಲಿ ಮೆಟ್ರೋ ಸೌಲಭ್ಯ ಹೊಂದಿರುವ ನಗರಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.

• ವಿಶ್ವದ ಅತಿ ದೊಡ್ಡ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ ಮೂಲಕ ಆರೋಗ್ಯ ಸೇವೆಯನ್ನು ತಳಮಟ್ಟದವರೆಗೂ ಕೊಂಡೊಯ್ದಿದ್ದೇವೆ. ಇದರ ಮೂಲಕ ಬಡವರು ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಲು ಸಮರ್ಥರಾಗಿದ್ದಾರೆ. ವೈದ್ಯಕೀಯ ವೆಚ್ಚಗಳಿಂದಾಗಿ ಅವರ ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕದಂತೆ ಆಯುಷ್ಮಾನ್ ಭಾರತ್ ಪ್ರಮುಖ ಪಾತ್ರ ವಹಿಸಿದೆ.

• ಒಂದು ಜಿಲ್ಲೆ ಒಂದು ಉತ್ಪನ್ನದ ಯೋಜನೆ ಮೂಲಕ ಕರ್ನಾಟಕದಲ್ಲಿನ ವಸ್ತುಗಳಿಗೆ ಮಾರುಕಟ್ಟೆ ಅವಕಾಶಗಳನ್ನು ತೆರೆಯುವುದು ನಮಗೆ ಸಾಧ್ಯವಾಗಲಿದೆ. ಮೇಕ್ ಇನ್ ಇಂಡಿಯಾದ ಯಶಸ್ಸು, ರಫ್ತು ಹೆಚ್ಚಳವು ಭಾರತದ ಅಭಿವೃದ್ಧಿಗೆ ಮಹತ್ವವಾಗಿವೆ. ಇದಕ್ಕೆ ಬೆಂಬಲವಾಗಿ ಉತ್ತಮ ಸಂಗ್ರಹ ವ್ಯವಸ್ಥೆಗಾಗಿ ನಾವು ನಮ್ಮ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ತಿಳಿಸಿದರು.