ಡ್ರಮ್‍ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ – ಮೂವರನ್ನು ಬಂಧಿಸಿದ ಪೊಲೀಸರು…

52
firstsuddi

ಬೆಂಗಳೂರು : ನಗರದ ಬೈಯಪ್ಪನಹಳ್ಳಿ ರೈಲ್ವೆ ಸ್ಟೇಷನ್ ನಲ್ಲಿ ಪ್ಲಾಸ್ಟಿಕ್ ಡ್ರಮ್‍ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಕಮಾಲ್, ತನ್ವೀರ್, ಶಾಕೀಬ್ ಬಂಧಿತ ಆರೋಪಿಗಳು. ಈ ಮೂವರೂ ಬಿಹಾರದ ಅರಾರಿಯಾ ಜಿಲ್ಲೆಯವರಾಗಿದ್ದು, ಬೆಂಗಳೂರಿನ ಸಿಟಿ ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಐವರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ತಮ್ಮನ್ನಾ ಮೊದಲು ಅಫ್ರೋಜ್ ಎಂಬಾತನನ್ನ ಮದುವೆ ಆಗಿದ್ದಳು. ಆದ್ರೆ, ಅಫ್ರೋಜ್ ವಿಶೇಷ ಚೇತನನಾಗಿದ್ದರಿಂದ ಆತನಿಂದ ಡಿವೋರ್ಸ್ ಪಡೆದು ಇಂತಿಕಾಬ್ ನೊಂದಿಗೆ ವಿವಾಹವಾಗಿ ಜಿಗಣಿಯಲ್ಲಿ ವಾಸವಿದ್ದಳು. ಅಫ್ರೋಜ್, ಇಂತಿಕಾಬ್ ನ ದೊಡ್ಡಪ್ಪನ ಮಗನಾಗಿದ್ದ. ತಮ್ಮನ್ನಾ ವಿಚ್ಛೇದನ ಪಡೆದು ಮೊದಲ ಗಂಡನ ಸಹೋದರನನ್ನೇ ಮದುವೆ ಆಗಿರುವುದು ಕುಟುಂಬಸ್ಥರ ಆಕ್ರೋಶಕ್ಕೂ ಕಾರಣವಾಗಿತ್ತು.

ಕುಟುಂಬವನ್ನೇ ಹಾಳು ಮಾಡುತ್ತಿದ್ದಾಳೆಂದು ತಮ್ಮನ್ನಾಳ ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿಗಳು, ಪ್ಲಾನ್ ನಂತೆ ಪಾರ್ಟಿ ಮಾಡುವುದಾಗಿ ಜಿಗಣಿಯಿಂದ ತಮ್ಮನ್ನಾಳನ್ನು ಮಾ.12ರಂದು ಕರೆಯಿಸಿಕೊಂಡಿದ್ದರು. ಪಾರ್ಟಿ ಬಳಿಕ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ಬಳಿಕ ಶವವನ್ನು ಡ್ರಮ್‍ನಲ್ಲಿ ಹಾಕಿಕೊಂಡು ಆಟೋ ಮೂಲಕ ರಾತ್ರಿ ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್ ನ ಗೇಟ್ ಬಳಿ ಇಟ್ಟು ಪರಾಗಿಯಾಗಿದ್ದರು.

ಡ್ರಮ್ ಮೂಲಕ ದುರ್ವಾಸನೆ ಬರಲಾರಂಭಿಸಿದ್ದು, ಅದನ್ನು ಆಟೋ ಚಾಲಕನೊಬ್ಬ ತೆರೆದು ನೋಡಿದಾಗ ಮಹಿಳೆ ಶವ ಇರುವುದು ಬೆಳಕಿಗೆ ಬಂದಿತ್ತು. ಕೂಡಲೇ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ನಂತರ ರೈಲ್ವೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದರು.