ಅಥಣಿ : ತಪ್ಪು ಕಲ್ಪನೆಯಿಂದ ಭಾರತ್ ಬಂದ್ ಮಾಡಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.
ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ರೈತರಿಗೆ ಅನುಕೂಲ ಮಾಡಲೆಂದು ಕೃಷಿ ಕಾನೂನು ವಿಧೇಯಕ ತಿದ್ದುಪಡಿ ಮಾಡಿದೆ. ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಹಕ್ಕನ್ನು ಸರ್ಕಾರ ನೀಡಿದೆ. ಕರ್ನಾಟಕದಲ್ಲಿ 2008ರಿಂದ ಈ ಕಾನೂನು ರೂಪಿಸಲಾಗಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಈ ಕಾನೂನಿಗೆ ತಿದ್ದುಪಡಿ ಮಾಡಿದೆ.
ಹರಿಯಾಣ, ಉತ್ತರಪ್ರದೇಶ, ಝಾರ್ಖಂಡ್ ರಾಜ್ಯದಲ್ಲಿ ದಲ್ಲಾಳಿಗಳು ರೈತರನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದು, ಈ ಕೃಷಿ ಕಾನೂನಿಂದ ದಲ್ಲಾಳಿಗಳಿಗೆ ನಷ್ಟ ಸಂಭವಿಸಿದ ಪರಿಣಾಮ ಈ ಕಾನೂನಿನ ಬಗ್ಗೆ ರೈತರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಕೃಷಿ ಕಾನೂನು ತಿದ್ದುಪಡಿ ರೈತರಿಗೆ ನಷ್ಟ ಸಂಭವಿಸುತ್ತದೆ ಎಂದು ಯಾರಾದರೂ ಸಾಬೀತು ಪಡಿಸಿದರೆ ನಾವು ಈ ಕಾನೂನು ಹಿಂಪಡೆಯಲು ಸಿದ್ದರಿದ್ದೇವೆ ಯಾರು ಈ ಕಾನೂನು ವಿರೋಧ ಪಡಿಸುತ್ತಾರೆ ಅವರು ಬಹಿರಂಗವಾಗಿ ಚರ್ಚೆಗೆ ಬರುವಂತೆ ಸವದಿ ಸವಾಲು ಹಾಕಿದರು.










