ತಾಲಿಬಾನ್ ಭಾರತದತ್ತ ಬಂದರೆ ವೈಮಾನಿಕ ದಾಳಿಗೆ ಸಿದ್ಧ – ಯೋಗಿ ಆದಿತ್ಯನಾಥ್ ಎಚ್ಚರಿಕೆ.

145
firstsuddi

ಲಕ್ನೋ : ತಾಲಿಬಾನ್ ಭಾರತದ ಕಡೆ ಬಂದರೆ ಅವರ ವಿರುದ್ಧ ವೈಮಾನಿಕ ದಾಳಿ(ಏರ್ ಸ್ಟ್ರೈಕ್) ಗೆ ಭಾರತ ಸಿದ್ಧವಾಗಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಸಾಮಾಜಿಕ ಪ್ರತಿನಿಧಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಅತ್ಯಂತ ಬಲಿಷ್ಠ ರಾಷ್ಟ್ರವಾಗಿದೆ. ಆದ್ದರಿಂದ ಬೇರೆ ದೇಶದವರು ನಮ್ಮತ್ತ ಕಣ್ಣು ಎತ್ತಿ ನೋಡಲು ಸಾಧ್ಯವಿಲ್ಲ. ಇಂದು ತಾಲಿಬಾನ್ ನಿಂದಾಗಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಎರಡೂ ಕಡೆ ಅಸ್ಥಿರತೆ ಉಂಟಾಗಿದೆ. ಆದರೆ ಅವರು ಭಾರತದೆಡೆಗೆ ಬಂದರೆ ವೈಮಾನಿಕ ದಾಳಿಗೆ ನಾವೂ ಸಿದ್ಧರಾಗಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್ ಬಗ್ಗೆ ಮಾತನಾಡಿರುವ ಆದಿತ್ಯನಾಥ್, ರಾಜ್ಭರ್ ಅವರ ಚಿಂತನೆಯ ಪ್ರಕ್ರಿಯೆಯು ಅವರ ಕುಟುಂಬದ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದೆ. ಅಲ್ಲಿ ಅಪ್ಪ ಸಚಿವನಾದರೆ ಒಬ್ಬ ಮಗ ಸಂಸದ ಆಗಲೇಬೇಕು..ಇನ್ನೊಬ್ಬ ಪುತ್ರನಿಗೆ ಎಂಎಲ್​ಸಿ ಸ್ಥಾನ ಕೊಡಲೇಬೇಕು. ಇಂಥ ಬ್ಲ್ಯಾಕ್​ಮೇಲ್​ ರಾಜಕೀಯ ಕೊನೆಯಾಗಬೇಕು ಎಂದೂ ಹೇಳಿದರು.

ಬಹ್ರೈಚ್ ನಲ್ಲಿ ಮಹಾರಾಜ ಸುಹೇಲ್ ದೇವ್ ಸ್ಮಾರಕ ಕಟ್ಟಲಾಗುತ್ತಿದೆ. ಬಹ್ರೈಚ್ ನ ವೈದ್ಯಕೀಯ ಕಾಲೇಜಿಗೆ ಸುಹೇಲ್ದೇವ್ ಹೆಸರು ಇಡಲಾಗಿದೆ. ಆದರೆ ವಿರೋಧ ಪಕ್ಷಗಳು ಸುಹೇಲ್ ದೇವ್ ಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇದೇ ವೇಳೆ, ರಾಮ ಭಕ್ತರನ್ನು ಹತ್ಯೆ ಮಾಡಿದವರು ದೇಶದ ಜನರನ್ನು ಕ್ಷಮೆ ಕೇಳುವ ಧೈರ್ಯವಿದೆಯೇ ಎಂದು ಪ್ರಶ್ನಿಸುವ ಮೂಲಕ ರಾಜಕೀಯ ವಿರೋಧಿಗಳ ವಿರುದ್ಧವೂ ವಾಗ್ದಾಳಿ ನಡೆಸಿದರು.