ಬೆಂಗಳೂರು : ಆಸ್ತಿ ತೆರಿಗೆ ಬಾಕಿ ಉಳಿಸಿಕೊಡ ಹಿನ್ನಲೆ ಬಿಬಿಎಂಪಿ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಗೆ ಬೀಗ ಜಡಿದಿದೆ.
ಬರೋಬ್ಬರಿ 39 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಆಸ್ತಿ ತೆರಿಗೆ ಪಾವತಿಸುವಂತೆ ಈ ಹಿಂದೆ ಬಿಬಿಎಂಪಿ ಸಾಕಷ್ಟು ಬಾರಿ ನೊಟೀಸ್ ನೀಡಿತ್ತು. ಆದರೆ ಮಾಲ್ ಮಾಲೀಕರು ಕ್ಯಾರೇ ಎಂದಿರಲಿಲ್ಲ. ಈ ನಿಟ್ಟಿನಲ್ಲಿ ಇಂದು ಕಠಿಣ ಕ್ರಮಕ್ಕೆ ಮುಂದಾದ ಬಿಬಿಎಂಪಿ ಮಾಲ್ ನ ಮುಖ್ಯ ದ್ವಾರಕ್ಕೆ ಬೀಗ ಹಾಕಿದೆ.
2017 ರಿಂದಲೂ ಮಂತ್ರಿ ಮಾಲ್ ತೆರಿಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದೆ. ಬಡ್ಡಿ ಹಣವೂ ಸೇರಿ 39 ಕೋಟಿ ರೂ ಬಾಕಿಯಾಗಿದೆ. ಮಂತ್ರಿ ಮಾಲ್ ಗೆ ನೋಟಿಸ್ ಕೊಟ್ಟು ಬಿಬಿಎಂಪಿ ಸುಸ್ತಾಗಿದೆ. ತೆರಿಗೆ ಕಟ್ಟದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಎಷ್ಟೇ ಹೇಳಿದರೂ ಮಂತ್ರಿ ಮಾಲ್ ನ ಆಡಳಿತಾಧಿಕಾರಿ ಮಾತ್ರ ಕೇಳುತ್ತಿಲ್ಲ. ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್ ಮೊದಲ ಸ್ಥಾನದಲ್ಲಿದೆ.
ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಮಂತ್ರಿ ಮಾಲ್ ಗೆ ಬೀಗ ಹಾಕಲಾಗಿತ್ತು. ಬಳಿಕ ಡಿಡಿ ಮೂಲಕ ಇಂದು 5 ಕೋಟಿ ರೂ.ಗಳಷ್ಟು ಪಾವತಿಸಿ, ಉಳಿದ ಹಣವನ್ನು ಅಕ್ಟೋಬರ್ ಅಂತ್ಯದ ವೇಳೆ ಕಟ್ಟುವುದಾಗಿ ಭರವಸೆ ನೀಡಿದ್ದರಿಂದ ಬೀಗ ತೆರವುಗೊಳಿಸಲಾಗಿದೆ.










