ದೇಶಾದ್ಯಂತ ಪಿಎಫ್ಐ, ಎಸ್‌ಡಿಪಿಐ ಕಚೇರಿ, ನಾಯಕರ ನಿವಾಸದ ಮೇಲೆ ಎನ್ಐಎ ದಾಳಿ…

55
firstsuddi

ನವದೆಹಲಿ: ದೇಶಾದ್ಯಂತ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ) ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ದಾಳಿ ನಡೆಸಿದೆ.

ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆ ಎನ್ಐಎ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ನೂರಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರು ಮತ್ತು ನಾಯಕರನ್ನು ಅರೆಸ್ಟ್ ಮಾಡಲಾಗಿದೆ.

ಭಯೋತ್ಪಾದನೆಗೆ ಹಣಕಾಸು ನೀಡಿರುವುದು, ಉಗ್ರಗಾಮಿ ಸಂಘಟನೆಗಳಿಗೆ ಸೇರಿಕೊಳ್ಳಲು ಜನರಿಗೆ ಪ್ರಚೋದನೆ ನೀಡುವುದು ಹಾಗೂ ಅವರಿಗೆ ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮುಂತಾದ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಇರುವ ವ್ಯಕ್ತಿಗಳ ಮೇಲೆ ದಾಳಿಗಳು ನಡೆದಿದ್ದು, ಅವರ ಕಚೇರಿ ಹಾಗೂ ಮನೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಕರ್ನಾಟಕದ ಹಲವೆಡೆ ದಾಳಿ :
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟಿಪ್ಪು ನಗರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ದಾಳಿ ನಡೆಸಿದ್ದು, ಎಸ್ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬಾತನನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳೀಯ ಪೊಲೀಸರು ಅಧಿಕಾರಿಗಳು, ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಯಿತು.

ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಮುಖಂಡ ಅಬ್ದುಲ್ ಫೈಯಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಈದ್ಗಾ ಕಾಲೋನಿಯ ಫೈಯಾಜ್ ಮನೆ ಮೇಲೆ ಇಂದು ಮೇಲೆ ಬೆಳಗಿನಜಾವ ಅಧಿಕಾರಿಗಳು ದಾಳಿ ನಡೆಸಿದ್ದರು.

ಶಿವಮೊಗ್ಗದ ಯಲಕಪ್ಪನ ಬೀದಿಯಲ್ಲಿನ ಪಿಎಫ್ಐ ರಾಜ್ಯ ವಲಯ ಅಧ್ಯಕ್ಷ ಶಾಹೀದ್ ಖಾನ್ ನಿವಾಸದ ಮೇಲೆ ಇಂದು ಬೆಳಗಿನ ಜಾವ 2 ಗಂಟೆ ವೇಳೆಗೆ ದಾಳಿ ನಡೆದಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಪರಿಶೀಲನೆ ಮುಗಿಸಿ, ಶಾಹೀದ್ ಖಾನ್ ವಶಕ್ಕೆ ಪಡೆದು ಕರೆದೊಯ್ಯಲಾಗಿದೆ. ಶಾಹೀದ್ ಖಾನ್ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಹಾವೇರಿ ಜಿಲ್ಲೆಯ ವಲಯ ಪಿಎಫ್ಐ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೈಸೂರಿನಲ್ಲೂ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಪಿಎಫ್ ಐ ಸಂಘಟನೆ ಜಿಲ್ಲಾ ಮಾಜಿ ಅಧ್ಯಕ್ಷ ಮೌಲಾನ ಮಹಮ್ಮದ್ ಕಲಿಮುಲ್ಲಾ ಎಂಬಾತನ ನಿವಾಸದ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.