ಹಾಸನ : ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಬೇಲೂರು ತಾಲ್ಲೂಕಿನ ಯಗಚಿ ಜಲಾಶಯ ಭರ್ತಿಯಾಗಿದೆ.
ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ ಎರಡು ಕ್ರಸ್ಟ್ ಗೇಟ್ ಗಳ ಮೂಲಕ ನೀರು ಹೊರ ಬಿಡಲಾಗಿತ್ತು. ಮತ್ತೆ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಉಳಿದ ಮೂರು ಕ್ರಸ್ಟ್ ಗೇಟ್ ಗಳ ತೆರೆದು ನೀರು ಹೊರಬಿಡಲಾಗಿದೆ. ಹೀಗಾಗಿ ಜಲಾನಯನ ಪ್ರದೇಶ ಹಾಗೂ ನದಿಯ ಅಕ್ಕಪಕ್ಕದಲ್ಲಿ ಯಾವುದೇ ಜನ, ಜಾನುವಾರುಗಳು ಪ್ರವೇಶಿಸಬಾರದು ಎಂದು ಎಇ ಶಿವಕುಮಾರ್ ಅವರು ತಿಳಿಸಿದ್ದಾರೆ.
ಚಿಕ್ಕಮಗಳೂರು, ಹಾಸನ ಮತ್ತು ಹೊಳೆ ನರಸೀಪುರದ ಕೆಲ ಭಾಗಗಳಿಗೆ ನೀರುಣಿಸುವ ಜಲಾಶಯ ಇದಾಗಿದ್ದು, ಈ ಬಾರಿ ಯಗಚಿ ಜಲಾಶಯ ಬಹುಬೇಗ ಭರ್ತಿಯಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.










