ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ‘ಎಲ್ಜಿಎಂ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ.
‘ಎಲ್ಜಿಎಂ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲು ಸಂತಸ ಆಗುತ್ತಿದೆ. ನಿಮ್ಮ ಮುಖದಲ್ಲಿ ನಗು ಮೂಡಿಸುವ ಫ್ಯಾಮಿಲಿ ಎಂಟರ್ ಟೈನ್ಮೆಂಟ್ ಸಿನಿಮಾಗಾಗಿ ಸಿದ್ಧರಾಗಿ. ಇಡೀ ತಂಡಕ್ಕೆ ಆಲ್ ದ ಬೆಸ್ಟ್’ ಎಂದು ಎಂ ಎಸ್ ಧೋನಿ ಪೋಸ್ಟ್ ಮಾಡಿದ್ದಾರೆ.
ವಿಕಾಸ್ ಹಸಿಜಾ ಅವರು ‘ಎಲ್ಜಿಎಂ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಫಸ್ಟ್ ಲುಕ್ ಬಿಡುಗಡೆ ಸಂದರ್ಭದಲ್ಲಿ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಶೀಘ್ರದಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿವೆ. ಈ ಸಿನಿಮಾ ಮೂಲಕ ತಮಿಳು ಚಿತ್ರೋದ್ಯಮದಲ್ಲಿ ನಮ್ಮ ಪಯಣ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.
‘ಎಲ್ಜಿಎಂ’ ಸಿನಿಮಾ ತಮಿಳಿನಲ್ಲಿ ಮೂಡಿಬರುತ್ತಿದೆ. ರಮೇಶ್ ತಮಿಳ್ಮಣಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಎಲ್ಜಿಎಂ’ ಸಿನಿಮಾ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿದ್ದು, ಹರೀಶ್ ಕಲ್ಯಾಣ್, ನದಿಯಾ ಹಾಗೂ ಲವ್ ಟು ಡೇ ಖ್ಯಾತಿಯ ಇವಾನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಯೋಗಿ ಬಾಬು ಹಾಗೂ ಮಿರ್ಚಿ ವಿಜಯ್ ತಾರಾಬಳಗದಲ್ಲಿದ್ದಾರೆ. ರಮೇಶ್ ತಮಿಳ್ಮಣಿ ಅವರು ಆ್ಯಕ್ಷನ್-ಕಟ್ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.










