ಬಾಲಿವುಡ್ ನಟಿ, ವಿಚಿತ್ರ ಕಾಸ್ಟ್ಯೂಮ್ ನಿಂದಾಗಿಯೇ ಫೇಮಸ್ ಆಗಿರುವ ಉರ್ಫಿ ಜಾವೇದ್ ಅವರನ್ನು ದುಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ಮುಂದಿನ ಪ್ರಾಜೆಕ್ಟ್ ನ ಕೆಲಸಕ್ಕೋಸ್ಕರ ಉರ್ಫಿ ಜಾವೇದ್ ಅವರು ಯುಎಇಗೆ ತೆರಳಿದ್ದಾರೆ. ಸಾರ್ವಜನಿಕವಾಗಿ ಅಶ್ಲೀಲ ಉಡುಪಿನಲ್ಲಿ ದುಬೈನಲ್ಲಿ ಅವರು ಚಿತ್ರೀಕರಣ ಮಾಡುತ್ತಿದ್ದಾಗ ಯುಎಇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ದುಬೈನಲ್ಲಿ ಈ ರೀತಿಯ ಬಟ್ಟೆಗಳನ್ನು ಹಾಕಿಕೊಂಡು ಸಾರ್ವಜನಿಕವಾಗಿ ಚಿತ್ರೀಕರಣ ಮಾಡಲು ಅವಕಾಶವಿಲ್ಲದ ಕಾರಣ ಈ ರೀತಿಯಲ್ಲಿ ಅವರು ಸಂಕಷ್ಟ ಎದುರಿಸಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಉರ್ಫಿ ಜಾವೇದ್ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ. ಚಿತ್ರ ವಿಚಿತ್ರ ಬಟ್ಟೆ ಹಾಕುವ ಕಾರಣದಿಂದಾಗಿಯೇ ಅವರ ಮೇಲೆ ದೂರನ್ನು ನೀಡಿದ್ದಾರೆ. ನಿನ್ನೆಯಷ್ಟೇ ಉರ್ಫಿ ಜಾವೇದ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿತ್ತು. ಆಸ್ಪತ್ರೆಯ ಬೆಡ್ ಮೇಲಿಂದಲೇ ತೆಗೆದ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಸ್ವತಃ ಉರ್ಫಿ ಅವರೇ ಹೇಳಿರುವಂತೆ ಅವರಿಗೆ ‘ಲಾರಿಂಜೈಟಿಸ್’ ತೊಂದರೆ ಆಗಿದೆಯಂತೆ. ಮನುಷ್ಯನ ಧ್ವನಿ ಪೆಟ್ಟಿಗೆಗೆ ತಗಲುವ ಸೋಂಕಿಗೆ ಲಾರಿಂಜೈಟಿಸ್ ಎಂದು ಕರೆಯುತ್ತಾರೆ. ಉರ್ಫಿಯ ಗಂಟಲಿಗೆ ಈ ಸೋಂಕು ತಗುಲಿದಿಯಂತೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಿಕಿತ್ಸೆಯನ್ನೂ ಅವರು ಪಡೆದಿದ್ದಾರೆ.










