ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಸಪ್ಲೈಯರ್ ಮೇಲೆ ಹಲ್ಲೆ : ಇಂದ್ರಜಿತ್ ಆರೋಪ…

94
firstsuddi

ಬೆಂಗಳೂರು : ನಟ ದರ್ಶನ್ ಹೆಸರಿನಲ್ಲಿ ಲೋನ್ ಪಡೆಯಲು ಮಹಿಳೆ ಯತ್ನಿಸಿದ ಪ್ರಕರಣ ಹೊಸ ತಿರುವು ಪಡೆದಿದ್ದು, ಈ ಪ್ರಕರಣಕ್ಕೆ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲಿನಲ್ಲಿ ದಲಿತ ಸಪ್ಲೈಯರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಸಪ್ಲೈಯರ್ ಕಣ್ಣುಗಳಿಗೆ ಹಾನಿಯಾಗಿದೆ. ಈ ಘಟನೆಯ ಸಂದರ್ಭದಲ್ಲಿ ದರ್ಶನ್, ರಾಕೇಶ್ ಶರ್ಮಾ, ಹರ್ಷ ಮೇಲಾಂಟ, ಪವಿತ್ರ ಗೌಡ, ಮತ್ತು ರಾಕೇಶ್ ಪಾಪಣ್ಣ ಇದ್ದರು. ಘಟನೆಯ ಬಳಿಕ ದಲಿತ ಯುವಕನಿಗೆ ದುಡ್ಡು ಕೊಟ್ಟು ಸುಮ್ಮನಿರಿಸಿದ್ದಾರೆ. ಈ ಘಟನೆ ಹೊರಗಡೆ ಬರಬಾರದು ಎಂಬ ಕಾರಣಕ್ಕೆ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿಸಿದ್ದಾರೆ. ಮೈಸೂರು ಪೊಲೀಸರು ಬಳೆ ತೊಟ್ಟಿದ್ದಾರಾ ಈ ಎಲ್ಲ ಘಟನೆಗಳ ಬಗ್ಗೆ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ನಿಮ್ಮ ತೋಟಕ್ಕೆ ಅರುಣಾಕುಮಾರಿಯನ್ನ ಯಾಕೆ ಕರೆಸಿಕೊಂಡ್ರಿ?. 25 ಕೋಟಿ ವಂಚನೆಗೆ ಒಳಗಾದವರು ಇಷ್ಟು ಬೇಗ ರಾಜಿ ಹೇಗೆ ಆಗುತ್ತಾರೆ?. ದರ್ಶನ್ ರಾಘವೇಂದ್ರ ಸ್ವಾಮಿಗಳ ಭಕ್ತ ಅಲ್ವಾ, ಆ ದೇವರ ಮೇಲೆ ಆಣೆ ಮಾಡಿ ಹೇಳಲಿ. ಯಾರೇ ತಪ್ಪು ಮಾಡಿದ್ರೂ ತಲೆ ತೆಗೆಯುತ್ತೇನೆ ಎನ್ನುವುದು ಒಬ್ಬ ಸೆಲೆಬ್ರಿಟಿ ಮಾತನಾಡುವ ಮಾತಾ ಎಂದು ಪ್ರಶ್ನಿಸಿರುವ ಅವರು ಆ ರೀತಿ ಮಾತನಾಡಿದವರು ಹೇಗೆ ರಾಜೀ ಮಾಡಿಕೊಂಡರು. 25 ಕೋಟಿ ವಂಚನೆ ಮಾಡುವುದು ಅಂದರೆ ತಮಾಷೆಯಾ ಮಾತಾ? ಈ ನಟ ಇನ್ನು ಬುದ್ದಿ ಕಲಿತಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸಾಕ್ಷಿ ಇಲ್ಲಾಂದ್ರೆ ನಾನು ಕೊಡುತ್ತೇನೆ ಎಂದಿದ್ದಾರೆ.