ಸ್ಯಾಂಡಲ್ ವುಡ್ ನ ನಟ ಕಿಶೋರ್ ಕೆಜಿಎಫ್ 2 ಚಿತ್ರದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಅದು ವಿವಾದಕ್ಕೀಡಾಗಿದೆ.
ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಕುರಿತು ಮಾತನಾಡಿರುವ ಅವರು, ‘ನಾನು ಕೆಜಿಎಫ್ 2 ಸಿನಿಮಾ ನೋಡಿಲ್ಲ. ನೋಡಬೇಕು ಅಂತ ಅನಿಸಿಲ್ಲ. ನಾನು ನೋಡುವ ಚಿತ್ರಗಳೇ ಬೇರೆ. ನನ್ನ ಅಭಿರುಚಿಯ ಸಿನಿಮಾ ಅದಲ್ಲ’ ಎಂದು ಹೇಳುವ ಮೂಲಕ ಅನೇಕರ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಕಿಶೋರ್ ನಟಿಸಿರುವ ಸಿನಿಮಾಗಳು, ಅವರ ಅಭಿರುಚಿಗೆ ತಕ್ಕದ್ದಾದ ಚಿತ್ರಗಳಾ ಎಂದು ಪ್ರಶ್ನೆಯನ್ನೂ ಹಲವರು ಮಾಡಿದ್ದಾರೆ.
ಈ ಹಿಂದೆಯೂ ಕಿಶೋರ್ ಅವರು ಕಾಂತಾರ ಸಿನಿಮಾದ ದೈವದ ಬಗ್ಗೆ ಕೆಲವು ಮಾತುಗಳನ್ನು ಬರೆದಿದ್ದರು. ನಂಬಿಕೆ, ಮೂಢನಂಬಿಕೆಗಳ ಬಗ್ಗೆ ಚರ್ಚೆ ಮಾಡಿದ್ದರು. ದೈವಗಳನ್ನು ಯಾರು ಹೇಗೆ ನಂಬಿದರೂ, ಮೂಢನಂಬಿಕೆಗಳ ಬಗ್ಗೆ ಜಾಗ್ರತೆ ಎನ್ನುವಂತೆ ಅವರ ಪೋಸ್ಟ್ ಹಿಂದಿನ ಕಾಳಜಿ ಆಗಿತ್ತು. ಆದರೆ, ಅದನ್ನು ಜನರು ಬೇರೆ ರೀತಿಯಲ್ಲೇ ತಗೆದುಕೊಂಡರು. ಪರ ವಿರೋಧದ ಚರ್ಚೆಯೂ ಆಗಿತ್ತು. ಇದೇ ಸಮಯದಲ್ಲೇ ಟ್ವಿಟರ್ ಖಾತೆ ಡಿಲಿಟ್ ಆಗಿ, ಅನೇಕ ಅನುಮಾನಗಳಿಗೂ ಕಾರಣವಾಗಿತ್ತು.
ದೈವದ ಕುರಿತಾಗಿ ಅವರು ಪೋಸ್ಟ್ ಮಾಡಿದ್ದರು ಎನ್ನುವ ಕಾರಣಕ್ಕಾಗಿ ಟ್ವಿಟರ್ ಅಕೌಂಟ್ ಅನ್ನು ಡಿಲಿಟ್ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಅಕೌಂಟ್ ಡಿಲಿಟ್ ಆಗಿರುವುದಕ್ಕೆ ಬೇರೆ ಕಾರಣವೇ ಇದೆ. ಅದನ್ನು ಸ್ವತಃ ಕಿಶೋರ್ ಅವರೇ ಹಂಚಿಕೊಂಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯು ಡಿಲಿಟ್ ಆಗಿರುವ ಕಾರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಿಶೋರ್, ‘ಅನವಶ್ಯಕ ಊಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೇ ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು. ನನ್ನ ಯಾವ ಪೋಸ್ಟ್ ನಿಂದಲೂ ಅಲ್ಲ. ಡಿಸೆಂಬರ್ 20ನೇ ತಾರೀಖು ಅಕೌಂಟ್ ಹ್ಯಾಕ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು’ ಎಂದು ಬರೆದಿದ್ದಾರೆ.










