ನಾನು ಖಾಸಗಿ ನ್ಯೂಸ್ ಚಾನಲ್‌ ಕ್ಯಾಮೆರಾಮೆನ್ ಎಂದು ಹೇಳಿ ವಂಚಿಸಿದ ನಕಲಿ ಪತ್ರಕರ್ತನ ವಿರುದ್ಧ ದೂರು ದಾಖಲು…

189
firstsuddi

ಬಂಟ್ವಾಳ: ‘ನಾನು ಖಾಸಗಿ ನ್ಯೂಸ್ ಚಾನಲ್‌ ಕ್ಯಾಮೆರಾಮೆನ್’ ಎಂದು ಹೇಳಿಕೊಂಡು ಸಿದ್ಧಕಟ್ಟೆ ನಿವಾಸಿ ಅಶೋಕ್ ಹಲಾಯಿ ಎಂಬಾತ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯವರಿಂದ 50 ಸಾವಿರ ಪಡೆದು ವಂಚಿಸಿದ ಘಟನೆ ಗುರುವಾರ ನಡೆದಿದೆ. ಶಾಲೆ ವಿವಾದವೊಂದಕ್ಕೆ ಸಂಬಂಧಿಸಿದಂತೆ ಅಶೋಕ್ ಹಲಾಯಿ ತಾನು ಖಾಸಗಿ ನ್ಯೂಸ್ ಚಾನಲ್‌ ಕ್ಯಾಮೆರಾಮೆನ್ ಎಂದು ಹೇಳಿಕೊಂಡು ಶಾಲೆಗೆ ಬಂದಿದ್ದಾನೆ. ಬಳಿಕ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಸುದ್ದಿ ಪ್ರಸಾರವಾಗದಂತೆ ಮಾಡಲು ತನಗೆ 50 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಸಂಸ್ಥೆ ಆಡಳಿತ ಮಂಡಳಿಯವರು ಆತನ ಬ್ಲ್ಯಾಕ್ ಮೇಲ್‌ಗೆ‌ ಮಣಿದು 50 ಸಾವಿರದ ಚೆಕ್ ನೀಡಿದ್ದಾರೆ. ಎಸ್.ವಿ.ಎಸ್ ಆಡಳಿತ ಮಂಡಳಿಯಿಂದ ಅಶೋಕನ ದೂರವಾಣಿ ಸಂಖ್ಯೆ ಪಡೆದ ಮಂಗಳೂರು ವರದಿಗಾರರು ಆತನಿಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಳಿಕ ಆತ 50 ಸಾವಿರದ ಚೆಕ್ ಅನ್ನು ಶಿಕ್ಷಣ ಸಂಸ್ಥೆಗೆ ವಾಪಸ್ ಕೊಟ್ಟು, ಕ್ಷಮೆಕೋರಿ ಪೊಲೀಸರಿಗೆ ದೂರು ನೀಡದಂತೆ ಅಂಗಲಾಚಿ ಕಾಲ್ಕಿತ್ತಿದ್ದಾನೆ. ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಶೋಕ್‌ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ.