ನಾನು ಪಶ್ಚಾತ್ತಾಪದ ಮಾತುಗಳನ್ನಾಡಿಲ್ಲ : ಸಿದ್ದರಾಮಯ್ಯ.

54
firstsuddi

ಹಾಸನ : ನಾನು ಯಾವುದೇ ಪಶ್ಚಾತ್ತಾಪದ ಮಾತುಗಳನ್ನು ಆಡಿಲ್ಲ. ನಾವು ಲಿಂಗಾಯಿತ ಧರ್ಮ ಮಾಡುವಾಗ ಏನೇನು ಮಾಡಿದ್ದೇನೆ ಅಂತ ಹೇಳಿದ್ದೀನಿ ಅಷ್ಟೇ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜಿಲ್ಲೆಯ ಎನ್ಆರ್ ಪುರ ತಾಲೂಕಿನಲ್ಲಿರುವ ಬಾಳೆಹೊನ್ನೂರು ಸಮೀಪದ ಶ್ರೀಮದ್ ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದರು. ಅಲ್ಲದೇ, ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದು ಕೆಲ ಮಾತುಕತೆ ನಡೆಸಿದ್ದರು. ಧರ್ಮ ಒಡೆಯುವುದು ನನ್ನ ಉದ್ದೇಶ ಆಗಿರಲಿಲ್ಲ. ಕೆಲವರು ನನ್ನನ್ನು ದಾರಿ ತಪ್ಪಿಸಿದರು. ಹೀಗೆಂದು ವೀರಶೈವ ಲಿಂಗಾಯತ ವಿಚಾರವಾಗಿ ಸಿದ್ದರಾಮಯ್ಯ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ನಾನು ರಂಭಾಪುರಿ ಶ್ರೀಗಳ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ, ಪಶ್ಚಾತ್ತಾಪ ಪಟ್ಟಿಲ್ಲ, ಏನಾಯ್ತು ಅಂತ ವಿವರಿಸಿದ್ದೇನೆ. ಇದು ಅಪಪ್ರಚಾರ ಆಗಿದೆ. ಧರ್ಮದ ಬಗ್ಗೆ ನಾನೇನು ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ. ಶ್ಯಾಮನೂರು ಶಿವಶಂಕರಪ್ಪ ಅವರು ವೀರಶೈವ ಧರ್ಮ ಮಾಡಿ ಅಂತ ಅರ್ಜಿ ಕೊಟ್ಟರು ಆಗಿನಿಂದ ಇದು ಶುರುವಾಯ್ತು ಅಷ್ಟೇ ಎಂದು ಹೇಳಿದರು.

ಬಿಜೆಪಿಯವರು ಯಾವ ನೀಚ ಕೆಲಸ ಮಾಡಲು ತಯಾರಾಗಿದ್ದಾರೆ, ಅವರು ನೀಚರು. ನಮ್ಮದು ದಾವಣಗೆರೆ ಸಮಾವೇಶ ಆಯ್ತಲ್ಲಾ ಆದಾದ ಮೇಲೆ ಭಯಗೊಂಡಿದ್ದಾರೆ. ಸೋಲುವ ಭಯ ಕಾಡಿದೆ. ಅದಕ್ಕೆ ಇವೆಲ್ಲಾ ಮಾಡ್ತಾ ಇದ್ದಾರೆ. ನಾನು ಆ.26 ರಂದು ಕೊಡಗಿಗೆ ಹೋಗಿ ಎಸ್ಪಿ ವಿರುದ್ಧವಾಗಿ ದೊಡ್ಡ ಪ್ರತಿಭಟನೆ ಮಾಡ್ತಾ ಇದ್ದೀನಿ. ತಿತಿಮತಿಯಲ್ಲಿ 10-15 ಹುಡುಗರು ಸೇರ್ಕಂಡು ಗೋ ಬ್ಯಾಕ್ ಸಿದ್ದರಾಮಯ್ಯ ಅಂತ ಘೋಷಣೆ ಕೂಗುತ್ತಿದ್ದರು. ಅದಾದ ಮೇಲೆ ಮಡಿಕೇರಿಯಲ್ಲಿ ಇದ್ದರು. ಪೊಲೀಸರು ರೌಂಡ್ ಅಪ್ ಮಾಡಿ ಕರ್ಕಂಡು ಹೋಗಲು ಆಗ್ತಿರ್ಲಿಲ್ವಾ, ಅದೇನ್ ದೊಡ್ಡ ಕೆಲಸನಾ. ಅವರೇ ಬಿಟ್ಟು ಸುಮ್ಮನೆ ನಿಂತಿದ್ದಾರೆ ಎಂದು ಕಿಡಿಕಾರಿದ್ದಾರೆ.