ಚಿಕ್ಕಮಗಳೂರು: ನಾನೆಂದು ಜಾತಿ ರಾಜಕಾರಣ ಮಾಡಿಲ್ಲ. ಆ ಬಗ್ಗೆ ನನ್ನ ಕನಸು-ಮನಸ್ಸಿಲ್ಲಿಯೂ ಯೋಚನೆ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಬಳಿಕ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಲಿಂಗಾಯುತ ಸಮುದಾಯದ ಅವಹೇಳನಾಕಾರಿ ಹೇಳಿಕೆ ಎಂದು ಕಾಂಗ್ರೆಸ್ ಬಿಂಬಿಸುತ್ತಿದ್ದು, ಅದು ಕಾಂಗ್ರೆಸ್ಸಿನ ಸುಳ್ಳಿನ ಫ್ಯಾಕ್ಟರಿಯಿಂದ ಬಂದ ಫೇಕ್ ನ್ಯೂಸ್, ಕಾಂಗ್ರೆಸ್ಸಿಗರೇ ಹಬ್ಬಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಇಂತಹ ಪ್ರಯತ್ನವನ್ನು ಹಿಂದೆಯೂ ಮಾಡಿ ವಿಫಲರಾಗಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಈಗಲೂ ವಿಫಲರಾಗುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ನಾನು ಮಾತನಾಡಿದ್ದರೆ ಕ್ಷಮೆಯಾಚನೆ ಮಾಡುತ್ತಿದ್ದೆ. ನಾನು ಆ ರೀತಿ ಮಾತನಾಡಿಲ್ಲ ಕ್ಷಮೆ ಕೇಳುವ ಪ್ರಮೇಯವೇ ಇಲ್ಲ ಎಂದರು.
ಜಾತಿ ಹೆಸರಿನಲ್ಲಿ ಒಡೆಯಬಹುದು ಎಂದು ಸುಳ್ಳಿನ ಫ್ಯಾಕ್ಟರಿ ಮೂಲಕ ದಾಳ ಉರುಳಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ದೂರು ನೀಡಲಾಗಿದೆ. ನನ್ನನ್ನ ಎಲ್ಲಾ ಜಾತಿಯ ಜನ ವೋಟ್ ಹಾಕಿ ಗೆಲ್ಲಿಸಿದ್ದಾರೆ. ಲಿಂಗಾಯುತ ಸಮುದಾಯವರು ನನ್ನನ್ನ ನಾಲ್ಕು ಬಾರಿ ಗೆಲ್ಲಿಸಿ ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕೂರಿಸಿದ್ದಾರೆ. ಲಿಂಗಾಯುತ ಸಮುದಾಯದ ಅಭ್ಯರ್ಥಿ ಇದ್ದಾಗಲೇ ಲಿಂಗಾಯುತ ಮತದಾರರು ಹೆಚ್ಚಿರುವ ಕಡೆಯೇ ನನಗೆ ಮತ ನೀಡಿ ಲೀಡ್ ಕೊಟ್ಟು ಗೆಲ್ಲಿಸಿದ್ದಾರೆ. ಅವರ ಆ ಋಣ ತೀರಿಸೋದಕ್ಕೆ ಆಗಲ್ಲ. ಹೀಗಿರುವಾಗ ನಾನೇಕೆ ಲಿಂಗಾಯುತ ಸಮುದಾಯದ ಬಗ್ಗೆ ಮಾತನಾಡಲಿ. ಬೆಂಗಳೂರು ಸುದ್ದಿ ಅನ್ನುತ್ತಾರೆ. ನಾನು 11 ದಿನದಿಂದ ಬೆಂಗಳೂರಿಗೆ ಹೋಗೇ ಇಲ್ಲ. ರಾಜ್ಯ ಪ್ರವಾಸದಲ್ಲಿ ಇದ್ದೇನೆ. ಎಲ್ಲಿ ಹೇಳಿಕೆ ನೀಡಿದ್ದೇನೆ ಎಂದು ಪ್ರಶ್ನಿಸಿದ್ದಾರೆ.