ನಾಯಕತ್ವದ ಬಗ್ಗೆ ಕಾಂಗ್ರೆಸ್‍ನಲ್ಲಿ ಯಾವ ಗೊಂದಲವೂ ಇಲ್ಲ; ಎಂ.ಬಿ. ಪಾಟೀಲ್.

42

ಬೆಂಗಳೂರು: ಸಿಎಂ ಬದಲಾವಣೆ, ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ, ಜಾತಿಗಣತಿ ಮಾಹಿತಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾವ ಸಮಸ್ಯೆಗಳೂ ಇಲ್ಲ. ಈ ಎಲ್ಲ ವಿಷಯಗಳ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ರವರು ತಿಳಿಸಿದರು. ಮಾಧ್ಯಮಗಾರರ ಜೊತೆ ನಿನ್ನೆ ಮಾತನಾಡಿದ ಅವರು, ಸಿಎಂ ಸ್ಥಾನದ ಕುರಿತು ಕಾಂಗ್ರೆಸ್‍ನಲ್ಲಿ ಯಾವ ಗೊಂದಲವೂ ಇಲ್ಲ. ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಸೋಮವಾರ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಕೂಡ ಸುರ್ಜೇವಾಲಾ ಇದನ್ನೇ ಸ್ಪಷ್ಟವಾಗಿ ತಿಳಿಸಿದ್ದಾರೆ. ಸಚಿವರಾದ ಜಿ. ಪರಮೇಶ್ವರ ಮತ್ತು ಕೆ.ಎನ್. ರಾಜಣ್ಣ ಅವರು ಕಾರಣಾಂತರಗಳಿಂದ ಕೆಪಿಸಿಸಿ ಸರ್ವಸದಸ್ಯರ ಸಭೆಗೆ ಬಂದಿರಲಿಲ್ಲ ಎಂದು ಹೇಳಿದರು. ಬೆಳಗಾವಿ ಜಿಲ್ಲೆಯ ರಾಜಕಾರಣ ಬಗ್ಗೆ ಡಿ.ಕೆ. ಶಿವಕುಮಾರ್ ಮತ್ತು ಸತೀಶ ಜಾರಕಿಹೊಳಿ ಮಧ್ಯೆ ಯಾವ ಜಗಳವೂ ಆಗಿಲ್ಲ ಎಂದು ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ನಾನು ಕಣ್ಣಿಟ್ಟಿಲ್ಲ. ಕೈಗಾರಿಕಾ ಸಚಿವನಾಗಿ ನಾನು ನನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ರಾಜಕೀಯದಲ್ಲಿ ನನಗೆ ಸಹಜವಾದ ಆಸೆ ಇದೆಯೇ ವಿನಾ ದುರಾಸೆಯಂತೂ ಇಲ್ಲ ಎಂದು ಹೇಳಿದರು.