ನಾವು ಅಧಿಕಾರಕ್ಕೆ ಬಂದ್ಮೇಲೆ ಅಕ್ರಮಗಳ ತನಿಖೆ ನಡೆಸ್ತೀವಿ : ಸಿದ್ದರಾಮಯ್ಯ.

64
firstsuddi

ಬೆಂಗಳೂರು : ರಾಜ್ಯ ಚುನಾವಣೆ ಹೊಸ್ತಿಲಿನಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರತಿಪಕ್ಷಗಳ ತಂತ್ರ ಮುಂದುವರಿದಿದೆ. ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ ಕೆ ಶಿವಕುಮಾರ್ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ತುರ್ತು ಸುದ್ದಿಗೋಷ್ಠಿ ಕರೆದು ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಆರೋಪಗಳ ಸುರಿಮಳೆಗೈದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಈ ಸರ್ಕಾರ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಲು ಪ್ರಾರಂಭಿಸಿದೆ. ಚುನಾವಣೆಗೆ ಇನ್ನೊಂದೇ ತಿಂಗಳು ಬಾಕಿ ಇರುವುದು. ಚುನಾವಣೆಗೆ ದುಡ್ಡು ಮಾಡಿಕೊಳ್ಳೋದಕ್ಕೋಸ್ಕರ ಅಸಮಾಧಾನ ಇರುವ ಮಂತ್ರಿಗಳು, ಶಾಸಕರಿಗೆ ದುಡ್ಡು ಮಾಡಿಕೊಡಲು ನೀರಾವರಿ ಇಲಾಖೆಯಲ್ಲಿ ಟೆಂಡರ್ ಕರೆಯುತ್ತಿದ್ದಾರೆ. ಪಾರದರ್ಶಕತೆ ಇಲ್ಲದೆ, ತರಾತುರಿಯಲ್ಲಿ ಕಾಮಗಾರಿ ಮಾಡಲು ಮುಂದಾಗಿದ್ದಾರೆ. ಕಮಿಷನ್ ಹೊಡೆಯಲು ಹೀಗೆ ಮಾಡುತ್ತಿದ್ದಾರೆ. ಇದು 40% ಕಮಿಷನ್ ನ ಮುಂದುವರಿದ ಭಾಗ. ಟೆಂಡರ್ ಮೊತ್ತ ಹೆಚ್ಚಳ ಮಾಡುತ್ತಿದ್ದು, ಬೇಕಾದವರಿಗೆ ಗುತ್ತಿಗೆ ಕೊಡುತ್ತಿದ್ದಾರೆ. ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳ ಕಚೇರಿಯಲ್ಲೇ ಕಮಿಷನ್ ನಡೆಯುತ್ತಿದೆ. ಜಾಸ್ತಿ ಕಮಿಷನ್ ಕೊಟ್ಟವರ ಬಿಲ್ ಮಾತ್ರ ಕ್ಲಿಯರ್ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ನಾವು ಎಚ್ಚರಿಕೆ ಕೊಡುತ್ತಾ ಇದ್ದೇವೆ, ಹುಷಾರ್. ಅಕ್ರಮ ಕೆಲಸಗಳಿಗೆ ಕೈ ಹಾಕಬೇಡಿ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಬಂದಮೇಲೆ ತನಿಖೆಗೆ ಸಮಿತಿ ರಚನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಒಂದೇ ದಿನದಲ್ಲಿ 18,000 ಕೋಟಿ ಬಿಲ್ ಆಗಿದೆ. ಗೂಳಿಹಟ್ಟಿ ಶೇಖರ್ ನೀರಾವರಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪ್ರತಿಯೊಂದಕ್ಕೆ ದಾಖಲಾತಿ ಕೊಡಿ ಎನ್ನುತ್ತಾರೆ. ಗೂಳಿಹಟ್ಟಿ ಶೇಖರ್ ಪತ್ರ ದಾಖಲಾತಿ ಅಲ್ಲವಾ? ಮಾನ ಮರ್ಯಾದೆ ಇಲ್ಲದ, ಲಜ್ಜೆಗೆಟ್ಟ ಸರ್ಕಾರ ಇದು. ಎಲ್ಲಾ ನೀರಾವರಿ ನಿಗಮಗಳಿಗೆ ಸಿಎಂ ಅಧ್ಯಕ್ಷರು, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಇದು ನಡೆದಿರುವುದು ಎಂದರು.

ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಒಂದು ತಿಂಗಳು ಮಾತ್ರ ಇರುತ್ತದೆ. ಇಡೀ ಸರ್ಕಾರ ತರಾತುರಿಯಲ್ಲಿ ಎಲ್ಲಾ ಇಲಾಖೆಗಳಲ್ಲಿ ಟೆಂಡರ್ ಮಾಡಿಸುತ್ತಿದೆ. ಟೆಂಡರ್ 500 ಕೋಟಿಯನ್ನು 1,000 ಕೋಟಿ ರೂ.ಗೆ ಹೆಚ್ಚು ಮಾಡುತ್ತಿದ್ದಾರೆ. ಟೆಂಡರ್ ಕೊಡಲು ಶಾಸಕರಿಗೆ ಹಂಚಿದ್ದಾರೆ. ಅವರು ಬೀದಿಯಲ್ಲಿ ನಿಂತು ಕೆಲಸ ಕೊಡುತ್ತೇವೆ ಬನ್ನಿ ಎಂದು ಕರೆಯುತ್ತಿದ್ದಾರೆ. ಕೆಲ ಮಂತ್ರಿಗಳು ಕ್ಯಾಬಿನೆಟ್ ಗೆ ತಂದು ಪಾಸ್ ಮಾಡಿಕೊಂಡರೆ, ಇನ್ನೂ ಕೆಲವರು ಹಾಗೆಯೇ ಟೆಂಡರ್ ಗೆ ಮುಂದಾಗಿದ್ದಾರೆ. ಚುನಾವಣೆ ಕೆಲಸಕ್ಕೆ ಹಣ ಕೊಡಿ ಎಂದು ಟೆಂಡರ್ ಒಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.