ಬಾಲಿವುಡ್ ನಿರ್ಮಾಪಕ ಯಶ್ ಚೋಪ್ರಾ ಪತ್ನಿ ನಿಧನ…

70
firstsuddi

ಬಾಲಿವುಡ್ ನಿರ್ಮಾಪಕ- ನಿರ್ದೇಶಕ ದಿವಂಗತ ಯಶ್ ಚೋಪ್ರಾ ಅವರ ಪತ್ನಿ ಪಮೇಲಾ ಚೋಪ್ರಾ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಚಿತ್ರರಂಗದಲ್ಲಿ ಗಾಯಕಿಯಾಗಿ ಪಮೇಲಾ ಚೋಪ್ರಾ ಗುರುತಿಸಿಕೊಂಡಿದ್ದರು. ಇದರ ಜೊತೆಗೆ ಅವರು ಬರಹಗಾರ್ತಿ ಹಾಗೂ ನಿರ್ಮಾಪಕಿ ಕೂಡ ಹೌದು. ಪಮೇಲಾ ಚೋಪ್ರಾ ಅವರಿಗೆ ವಯೋಸಹಜ ಕಾಯಿಲೆ ಕಾಡುತ್ತಿತ್ತು. ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿ ಕಳೆದ 15 ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.

1970ರಲ್ಲಿ ಯಶ್ ಚೋಪ್ರಾ ಜೊತೆ ಪಮೇಲಾ ಚೋಪ್ರಾ ಮದುವೆ ನಡೆದಿತ್ತು. ಈ ದಂಪತಿಗೆ ಆದಿತ್ಯ- ಉದಯ್ ಇಬ್ಬರು ಮಕ್ಕಳಿದ್ದಾರೆ. ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಆದಿತ್ಯ ಚೋಪ್ರಾ ಅವರು ನಿರ್ಮಾಪಕ ಹಾಗೂ ನಿರ್ದೇಶಕ. ಅವರು ರಾಣಿ ಮುಖರ್ಜಿಯನ್ನು ಮದುವೆ ಆಗಿದ್ದಾರೆ. ಉದಯ್ ಅವರು ನಟ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

ಪಮೇಲಾ ಅವರು ಅನೇಕ ಹಾಡುಗಳನ್ನು ಹಾಡಿದ್ದರು. ವಿಶೇಷ ಎಂದರೆ ಗಾಯಕಿಯಾಗಿದ್ದ ಪಮೇಲಾ ಪತಿ ಯಶ್ ಚೋಪ್ರಾ ಸಿನಿಮಾಗಳಿಗೆ ಹಾಡಿದ್ದರು. ‘ಕಬಿ ಕಬೀ’ ಚಿತ್ರದಿಂದ ‘ಮುಜ್ಸೇ ದೋಸ್ತಿ ಕರೊಗೆ’ ಚಿತ್ರಗಳವರೆಗೆ ಹಾಡಿದ್ದಾರೆ.

ಚಿತ್ರರಂಗದ ಸ್ನೇಹಿತರು, ಆಪ್ತರು ಹಾಗೂ ಅಭಿಮಾನಿಗಳು ಗಾಯಕಿ ಪಮೇಲಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪಮೇಲಾ ಅವರ ಅಂತ್ಯಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.