ಪಠಾಣ್ ಬಿಡುಗಡೆಗೆ ವಿರೋಧ ; ಚಿತ್ರಮಂದಿರಕ್ಕೆ ನುಗ್ಗಿ ಪೋಸ್ಟರ್ ಹರಿದ ಭಜರಂಗ ದಳದ ಕಾರ್ಯಕರ್ತರು…

49
firstsuddi

ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾ ಬಿಡುಗಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಹಲವೆಡೆ ಪ್ರತಿಭಟನೆ ಕೂಡ ನಡೆದಿವೆ, ಈಗ ದಾಳಿಯಂತಹ ಪ್ರಕರಣಗಳು ನಡೆಯುತ್ತಿವೆ.

ಗುಜರಾತ್ ನ ಅಹ್ಮದಾಬಾದ್ ನ ಮಾಲ್ ಒಂದರಲ್ಲಿ ಪಠಾಣ್ ಸಿನಿಮಾದ ಪೋಸ್ಟರ್ ಅಂಟಿಸಲಾಗಿತ್ತು. ಅದನ್ನು ಕಿತ್ತು ಹಾಕುವ ಮೂಲಕ ಭಜರಂಗ ದಳದ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಪೋಸ್ಟರ್ ಹರಿದು ಹಾಕಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.

ಯಾವುದೇ ಸಿನಿಮಾ ಮಂದಿರದಲ್ಲೂ ಈ ಸಿನಿಮಾ ಪ್ರದರ್ಶನ ಮಾಡಬಾರದು, ಮಾಡಿದರೆ ದಾಳಿ ಮಾಡುವುದಾಗಿಯೂ ಭಜರಂಗ ದಳದ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಘಟನೆಯ ಕುರಿತಾಗಿ ಮಾತನಾಡಿರುವ ಥಿಯೇಟರ್ ಮಾಲೀಕರು, ಕೇವಲ ಪೋಸ್ಟರ್ ಮಾತ್ರ ಹರಿದು ಹಾಕದೇ, ಈ ಸಿನಿಮಾವನ್ನು ಪ್ರದರ್ಶನ ಮಾಡಬಾರದು ಎಂದು ಬೆದರಿಕೆ ಕೂಡ ಹಾಕಿದ್ದಾರೆ ಎಂದಿದ್ದಾರೆ.

ಇದೇ ಜನವರಿ 25ರಂದು ವಿಶ್ವದಾದ್ಯಂತ ಪಠಾಣ್ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕೂ ಮುನ್ನ ಜನವರಿ 10ರಂದು ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಆಗುತ್ತಿದ್ದು, ಶಾರುಖ್ ಅಂಡ್ ಟೀಮ್ ಚಿತ್ರದ ಭರ್ಜರಿ ಪ್ರಚಾರ ನಡೆಸುತ್ತಿದೆ.