ಬೆಂಗಳೂರು: ಹಿರಿಯ ಪತ್ರಕರ್ತ ಪ್ರಸಾದ್ ಹೆಗಡೆ (45) ಅವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಸಿರಸಿಯ ಸದ್ಗತಿ ನೆಮ್ಮದಿ ಕುಟೀರದಲ್ಲಿ ನೆರವೇರಲಿದೆ.
ಮೂಲತಃ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೆಳಗುಂದ್ಲಿಯವರಾದ ಪ್ರಸಾದ್ ಹೆಗಡೆ ಪ್ರಸ್ತುತ ರಾಜ್ ನ್ಯೂಸ್ ಔಟ್ ಪುಟ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮುಗಿಸಿದ್ದ ಪ್ರಸಾದ್, ರಂಗಭೂಮಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಆದರೆ ಪದವಿ ಬಳಿಕ ಮಾಧ್ಯಮದೆಡೆಗೆ ವಾಲಿದರು. ಮೈಸೂರು ದಿಗಂತ ಪತ್ರಿಕೆಯಲ್ಲಿ ಪತ್ರಕರ್ತ ವೃತ್ತಿಯನ್ನು ಆರಂಭಿಸಿದ ಪ್ರಸಾದ್, ಬಳಿಕ ಹಲೋ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ.
ನಂತರ ಬೆಂಗಳೂರಿಗೆ ಬಂದು ದೃಶ್ಯ ಮಾಧ್ಯಮದಲ್ಲಿ ತನ್ನ ವೃತ್ತಿಯನ್ನು ಮುಂದುವರಿಸಿದರು. ಕಸ್ತೂರಿ ಟಿವಿಯಲ್ಲಿ ರಾಜಕೀಯ ವರದಿಗಾರರಾಗಿ, ನಿರೂಪಕರಾಗಿ, ರಾಜಕೀಯ ವಿಶ್ಲೇಷಕರಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಬಳಿಕ ಪ್ರಜಾ ಟಿವಿ, ದಿಗ್ವಿಜಯ ನ್ಯೂಸ್, ನ್ಯೂಸ್ ಫಸ್ಟ್ ಸಂಸ್ಥೆಗಳಲ್ಲಿಯೂ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.