ಪತ್ರಕರ್ತ ಸಿದ್ದಿಕ್ ಕಪ್ಪನ್ ಜೈಲಿನಿಂದ ಬಿಡುಗಡೆ…

199
firstsuddi

ಲಕ್ನೋ: ಪಿಎಂಎಲ್ಎ ಕಾಯ್ದೆ ಅಡಿ ಎರಡು ವರ್ಷಗಳ ಹಿಂದೆ ಬಂಧಿತರಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಲಕ್ನೋ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜಾರಿ ನಿರ್ದೇಶನಾಲಯವು ಸಲ್ಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ನಿಂದ ಡಿಸೆಂಬರ್ 23 ರಂದು ಜಾಮೀನು ಪಡೆದ ಒಂದು ತಿಂಗಳ ನಂತರ ಕಪ್ಪನ್ ಬಿಡುಗಡೆಯಾಗಿದ್ದಾರೆ.

2020ರಲ್ಲಿ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 2020 ಅಕ್ಟೋರ್ 5ರಂದು ದಲಿತ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸುದ್ದಿಯನ್ನು ವರದಿ ಮಾಡಲು ಹೋಗಿದ್ದ ವೇಳೆ ಸಿದ್ದಿಕ್ ಕಪ್ಪನ್ ಸೇರಿ ನಾಲ್ವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.

ಈ ನಾಲ್ವರು ಪಿಎಫ್ ಐ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಇಲ್ಲಿ ಕಾನೂನು ವ್ಯವಸ್ಥೆಯನ್ನು ಹಾಳು ಮಾಡುವ ಸಂಚು ರೂಪಿಸಿದ್ದರು ಎಂಬುದು ಪೊಲೀಸರ ಆರೋಪವಾಗಿತ್ತು. ಅದರಂತೆ ಐಟಿ, ಯುಎಪಿಎ ಮತ್ತು ಇಪಿಸಿ ಕಾಯ್ದೆಗಳ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಕಪ್ಪನ್ ವಿರುದ್ಧ ಪ್ರಕರಣಗಳು ದಾಖಲಾದವು. ನಂತರ ಮನಿ ಲಾಂಡರಿಂಗ್ ಕಾಯ್ದೆ ಅಡಿ ಜಾರಿ ನಿರ್ದೇಶನಾಲಯವು ಸಿದ್ದಿಕ್ ಕಪ್ಪನ್ ಮೇಲೆ ಪ್ರಕರಣ ದಾಖಲಿಸಿತ್ತು. 2020 ಅಕ್ಟೋಬರ್ ತಿಂಗಳಲ್ಲಿ ಕಪ್ಪನ್ ಅವರನ್ನು ಲಕ್ನೋ ಕಾರಾಗೃಹದಲ್ಲಿ ಇರಿಸಲಾಗಿತ್ತು. ಎರಡು ವರ್ಷಗಳಿಗೂ ಹೆಚ್ಚು ಕಾಲ ಅವರು ಜೈಲಿನಲ್ಲಿಯೇ ಇದ್ದು, ಇದೀಗ ಬಿಡುಗಡೆಯಾಗಿದ್ದಾರೆ.

ಬಿಡುಗಡೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಪ್ಪನ್ 28 ತಿಂಗಳು ಸುದೀರ್ಘ ಹೋರಾಟದ ಬಳಿಕ ನಾನು ಹೊರಗಿದ್ದೇನೆ. ಮಾಧ್ಯಮಗಳಿಂದ ನನಗೆ ಸಾಕಷ್ಟು ಬೆಂಬಲ ಸಿಕ್ಕಿದೆ, ಅದರಿಂದ ಸಂತೋಷವಾಗಿದ್ದೇನೆ ಎಂದು ಅವರು ಹೇಳಿದ್ದಾರೆ.