ಹಾವೇರಿ : ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬರುವಂತೆ ಮಾಡುತ್ತೇನೆಂದು ಶಿಕ್ಷಕನೊಬ್ಬ ವಿದ್ಯಾರ್ಥಿನಿ ಕೆನ್ನೆಗೆ ಮುತ್ತು ಕೊಟ್ಟು ಅಸಭ್ಯವಾಗಿ ವರ್ತಿಸಿದ ಘಟನೆ ಜಿಲ್ಲೆಯ ಹಿರೇಕೆರೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏಪ್ರೀಲ್ 8ರಂದು ನಡೆದಿದ್ದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪರಮೇಶ್ ಐರಣಿ (45) ಆರೋಪಿ. ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿದ್ದನು. ವಿದ್ಯಾರ್ಥಿನಿ ಪರೀಕ್ಷೆ ಬರೆಯುತ್ತಿದ್ದ ಪರೀಕ್ಷಾ ಕೇಂದ್ರದ ಸುಪರ್ ವೈಸರ್ ಆಗಿದ್ದ ಶಿಕ್ಷಕ ಪರಮೇಶ್ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬರುವಂತೆ ಮಾಡುತ್ತೇನೆಂದು, ವಿದ್ಯಾರ್ಥಿನಿ ಕೆನ್ನೆಗೆ ಮುತ್ತುಕೊಟ್ಟು ಅಸಭ್ಯವಾಗಿ ವರ್ತಿಸಿದ್ದನು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾದಾಗಿನಿಂದ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ಶಿಕ್ಷಕನ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.










