ಬೆಂಗಳೂರು : ಕಾರೊಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟರೆ, ಮೂವರು ಗಾಯಗೊಂಡಿರುವ ಘಟನೆ ನಗರದ ಕತ್ರಿಗುಪ್ಪೆ ಬಳಿ ಇಂದು ಬೆಳಗ್ಗೆ ನಡೆದಿದೆ.
ಘಟನೆಯಲ್ಲಿ ಸುರೇಶ್ ಸಾವಿಗೀಡಾದರೆ, ಸಚಿನ್, ಶಿವರಾಜ್ ಹಾಗೂ ಶೈಲೇಂದ್ರ ಎಂಬುವವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಧಾರಾವಾಹಿಯೊಂದರ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ಮುಕೇಶ್ ಎಂಬುವವರು ಇಂದು ಶೂಟಿಂಗ್ ಮುಗಿಸಿಕೊಂಡು ಕತ್ತರಿಗುಪ್ಪೆ ಜಂಕ್ಷನ್ ನಿಂದ ಇಟ್ಟಮಡು ಜಂಕ್ಷನ್ ಕಡೆ ಕಾರಿನಲ್ಲಿ ವೇಗವಾಗಿ ಬಂದಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ನಾಲ್ವರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಪಾದಾಚಾರಿಗಳು ಮೇಲಕ್ಕೆ ಚಿಮ್ಮಿದ್ದಾರೆ. ಅಲ್ಲದೇ ಸ್ಥಳದಲ್ಲೇ ಇದ್ದ ಇನ್ನೊಂದು ಕಾರು ಹಾಗೂ ಬೈಕಿಗೂ ಡಿಕ್ಕಿಯಾಗಿದೆ.
ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕ ಮುಖೇಶ್ ನನ್ನು ಪೊಲೀಸರು ಬಂಧಿಸಿದ್ದು, ಆತನ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.










