ಬೆಂಗಳೂರು : ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ಸಂಬಂಧ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ವಿಪ್ರ ವೇದಿಕೆ ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ಸಂಬಂಧ ಹಂಸಲೇಖ ಅವರು ಇಂದು ಹಾಜರಾಗಿದ್ದು, ಜೊತೆಗೆ ನಟ ಚೇತನ್ ಕೂಡಾ ಪೊಲೀಸ್ ಠಾಣೆಗೆ ಬಂದಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆ ಮುಂದೆ ಹೈಡ್ರಾಮವೇ ನಡೆಯಿತು. ನಟ ಚೇತನ್ ಅವರು ಹಂಸಲೇಖ ಅವರ ಜೊತೆಗೆ ಆಗಮಿಸಿರುವುದನ್ನು ಖಂಡಿಸಿರುವ ಭಜರಂಗದಳ ಕಾರ್ಯಕರ್ತರು, ಕಪ್ಪು ಬಾವುಟ ಪ್ರದರ್ಶಿಸಿ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಹಂಸಲೇಖ ಪರ ಮತ್ತು ವಿರೋಧಿಗಳು ಪ್ರತಿಭಟನೆ ನಡೆಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಬಂದೋಬಸ್ತ್ ಮಾಡಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ನಟ ಚೇತನ್ ಕನ್ನಡಪರ ಸಂಘಟನೆಗಳ ಸರ್ಪಗಾವಲಿನಲ್ಲಿ ಠಾಣೆಗೆ ಆಗಮಿಸಿದ್ದಾರೆ.










