ಕಲಬುರಗಿ : ಗಾಂಜಾ ದಂಧೆಕೋರರು ಪೊಲೀಸರ ಮೇಲೇಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರ- ಕರ್ನಾಟಕ ಗಡಿಭಾಗದ ಹೊನ್ನಾಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಕಮಲಾಪುರ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ ಅವರ ಹೊಟ್ಟೆ, ತಲೆ ಹಾಗೂ ದೇಹದ ಹಲವಡೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಏನಿದು ಪ್ರಕರಣ? : ಕಳೆದ ಎರಡು ದಿನಗಳ ಹಿಂದೆ ಕಮಲಾಪುರ ತಾಲೂಕಿನ ದಸ್ತಾಪುರ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕಲಬುರಗಿಯ ನವೀನ ಹಾಗೂ ಬಸವಕಲ್ಯಾಣ ತಾಲೂಕು ಭೋಸಗಾದ ಸಂತೋಷ ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಇವರು ನೀಡಿದ ಮಾಹಿತಿ ಆಧಾರದ ಮೇಲೆ ಗಾಂಜಾ ಬೆಳೆಯ ಮೂಲಸ್ಥಾನ ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಹೊನ್ನಾಳಿ ಜಮೀನೊಂದರ ಮೇಲೆ ಕಮಲಾಪುರ ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದ 10 ಜನರ ತಂಡ ದಾಳಿ ನಡೆಸಿತ್ತು.
ಈ ವೇಳೆ ಪೊಲೀಸರ ಮೇಲೆ ಸುಮಾರು 30-40 ಮಂದಿ ಗಾಂಜಾ ದಂಧೆಕೋರರು ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದಾಳಿ ಮಾಡುತ್ತಿದ್ದಂತೆ ಸಿಪಿಐ ಶ್ರೀಮಂತ ಇಲ್ಲಾಳ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಗಾಂಜಾ ದಂಧೆಕೋರರು ಪೊಲೀಸರನ್ನೆ ಅಟ್ಟಾಡಿಸಿದ್ದಾರೆ. ಕೊನೆಗೆ ಪ್ರಾಣ ಉಳಿಸಿಕೊಳ್ಳಲು ಪೊಲೀಸರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿಪಿಐ ಇಲ್ಲಾಳ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಸದ್ಯ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಎಸ್ಪಿ ಇಶಾ ಪಂತ್ ಭೇಟಿ ನೀಡಿದ್ದು, ಶ್ರೀಮಂತ ಇಲ್ಲಾಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.










