ಡೆಹ್ರಾಡೂನ್ : ರೆಸಾರ್ಟ್ ರಿಸೆಪ್ಷನಿಸ್ಟ್ ಆಗಿದ್ದ ಯುವತಿಯ ಹತ್ಯೆ ಪ್ರಕರಣ ಸಂಬಂಧ ಬಂಧಿತ ಆರೋಪಿ, ಬಿಜೆಪಿ ನಾಯಕನ ಮಗನ ಒಡೆತನದ ರೆಸಾರ್ಟ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗಿದೆ.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆದೇಶದಂತೆ ಉತ್ತರಾಖಂಡದ ಋಷಿಕೇಶದಲ್ಲಿರವ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಒಡೆತನದ ವನತಾರಾ ರೆಸಾರ್ಟ್ ನ್ನು ಕೆಡವಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ರೆಸಾರ್ಟ್ ನಲ್ಲಿ ರಿಸೆಪ್ಷನಿಸ್ಟ್ ಆಗಿದ್ದ 19 ವರ್ಷದ ಅಂಕಿತಾ ಭಂಡಾರಿ ಎಂಬ ಯುವತಿ ನಾಪತ್ತೆಯಾಗಿದ್ದಳು. ಯುವತಿ ಕಾಣೆಯಾಗಿದ್ದಾಳೆ ಎಂದು ಆಕೆ ಕುಟುಂಬದವರಂತೆ ಪೊಲೀಸ್ ಠಾಣೆಯಲ್ಲಿ ಪುಲ್ಕಿತ್ ಆರ್ಯ ದೂರು ದಾಖಲಿಸಿದ್ದರು. ಬಳಿಕ ಯುವತಿಯ ಶವ ಸೆಪ್ಟೆಂಬರ್ 23ರಂದು ಪತ್ತೆಯಾಗಿದೆ.
ರಿಸೆಪ್ಷನಿಸ್ಟ್ ಯುವತಿಯನ್ನು ಕೊಂದು, ಕಾಲುವೆಗೆ ಎಸೆದಿರುವ ಬಗ್ಗೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರರಾದ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪುಲ್ಕಿತ್ ಆರ್ಯ ಆ ಯುವತಿಯನ್ನು ವೇಶ್ಯಾವಾಟಿಕೆಗೆ ಬಲವಂತ ಮಾಡುತ್ತಿದ್ದ. ಅದಕ್ಕೆ ಆಕೆ ಒಪ್ಪದಿದ್ದಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.










