ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ…

112
First Suddi

ಕಲಬುರಗಿ : ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ರೌಡಿ ನಿಗ್ರಹ ದಳ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ
ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ನಿವಾಸಿ ಭೀಮು ಬಂಧಿತ ಆರೋಪಿ. ಬಾಬು ಹಾಗೂ ಇಬ್ಬರು ಹೆಣ್ಣು ಮಕ್ಕಳು ಸೇರಿ ಒಟ್ಟು ನಾಲ್ಕು ಜನ ಎರಡು ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಲು ಮುಂದಾದಾಗ ಆರೋಪಿ ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆತ್ಮ ರಕ್ಷಣೆಗಾಗಿ ರೌಡಿ ನಿಗ್ರಹ ದಳದ ಪಿಎಸ್ಐ ವಾಹೀದ್ ಕೋತ್ವಾಲ್ ಅವರು ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.
ನಗರದ ಹೊರವಲಯದಲ್ಲಿರುವ ಸ್ವಾಮಿ ಸಮರ್ಥ ದೇವಾಲಯದ ಬಳಿ ಪೊಲೀಸರು ಫೈರಿಂಗ್ ನಡೆಸಿದ್ದು, ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಭೀಮು (34) ಬಲಗಾಲಿಗೆ ಗುಂಡು ತಗುಲಿದೆ. ಆರೋಪಿಯಿಂದ 300 ಕೆಜಿಗೂ ಅಧಿಕ ಗಾಂಜಾ ವಶಪಡಿಸಿಕೊಂಡಿರುವ ಪೊಲೀಸರು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.