ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೌರಕಾರ್ಮಿಕರು ರಾಜ್ಯದಲ್ಲಿ ಹಲವು ಕಡೆ ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಎಲ್ಲ ರೀತಿಯ ಚರ್ಚೆ ನಡೆದಿದ್ದು, ಇಂದು ಮುಷ್ಕರ ಹಿಂಪಡೆಯುತ್ತಾರೆ ಎಂದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಹೈದರಾಬಾದ್ ಗೆ ತೆರಳುವ ಮುನ್ನ ಆರ್.ಟಿ ನಗರ ನಿವಾಸದ ಬಳಿ ಮಾತನಾಡಿದ ಸಿಎಂ, ಸಹಾನುಭೂತಿಯಿಂದ, ಮಾನವೀಯತೆಯಿಂದ ಕ್ರಮ ತೆಗೆದುಕೊಂಡು ಕಾನೂನು ಮಾಡಬೇಕೆಂದು ಕೊಂಡಿದ್ದೇವೆ. ಮೂರು ತಿಂಗಳಲ್ಲಿ ಯಾವ ರೀತಿ ನೇಮಕಾತಿ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಕ್ರಮಕ್ಕೆ ಲೀಗಲ್ ಮತ್ತು ಟೆಕ್ನಿಕಲ್ ಆಗಿ ಏನು ಮಾಡಬೇಕು ಅನ್ನೋ ಬಗ್ಗೆ ಪೌರ ಕಾರ್ಮಿಕರು ಮತ್ತು ಅಧಿಕಾರಿಗಳ ಜಂಟಿ ಸಮಿತಿ ಮಾಡಿದ್ದೇವೆ. ಪೌರಕಾರ್ಮಿಕರ ಸಂರಕ್ಷಣೆಗಾಗಿ ಹೆಲ್ತ್, ಎಜುಕೇಷನ್ ಬಗ್ಗೆ ಹೊಸ ಕಾನೂನನ್ನು ರಚನೆ ಮಾಡಬೇಕು. ಮುಂದಿನ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದರು.
ಹೈದರಾಬಾದ್ ನಲ್ಲಿ ಎರಡು ದಿನಗಳ ಕಾರ್ಯಕಾರಣಿ ಸಭೆ ಇದೆ. ನಾಳೆ ಸಂಜೆ ಬೆಂಗಳೂರಿಗೆ ವಾಪಸ್ ಬರುತ್ತೇನೆ. ಅಮಿತ್ ಶಾ ಹಾಗೂ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತೇನೆ ಎಂದರು.










