ಬಣ್ಣ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯನ್ನ ಕೊಂದ ಪಾನಮತ್ತ ಯುವಕರು…

70
firstsuddi

ಜಾರ್ಖಂಡ್: ವೃದ್ಧೆಯನ್ನು ಯುವಕರ ಗುಂಪೊಂದು ಥಳಿಸಿ ಕೊಲೆಗೈದ ಘಟನೆ ಜಾರ್ಖಂಡ್ ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ. ಹೋಳಿ ಆಚರಣೆಯ ಸಂದರ್ಭದಲ್ಲಿ ಪಾನಮತ್ತ ಯುವಕರ ಗುಂಪು ಈ ದುಷ್ಕೃತ್ಯ ಎಸಗಿದೆ.

ಮೃತಳನ್ನು ಮುಟ್ಟಿ ದೇವಿ ಎಂದು ಗುರುತಿಸಲಾಗಿದೆ. ಬಲಬದ್ಧಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋರ್ ನಿಮಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೋಳಿ ಬಣ್ಣದಾಟದ ಸಮಯದಲ್ಲಿ ಬಲವಂತವಾಗಿ ಬಣ್ಣ ಎರಚುವುದನ್ನು ವೃದ್ಧೆಯೊಬ್ಬರು ವಿರೋಧಿಸಿದ್ದಾರೆ. ಈ ವೇಳೆ ಪಾನಮತ್ತ ಯುವಕರು ಆಕೆಗೆ ಥಳಿಸಿದ್ದಾರೆ.

ಬಳಿಕ ಆಕೆ ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿದ ಮೃತ ಮಹಿಳೆಯ ಪುತ್ರ ಮುರಾರಿ ಸಿಂಗ್, ಇದು ಯಾವುದೇ ದ್ವೇಷಕ್ಕಾಗಿ ನಡೆದ ಪ್ರಕರಣವಲ್ಲ, ಮದ್ಯದ ಅಮಲಿನಲ್ಲಿ ಹೋಳಿ ಆಚರಿಸುತ್ತಿದ್ದವರು ಬಲವಂತವಾಗಿ ಬಣ್ಣ ಹಚ್ಚುತ್ತಿದ್ದರು ಮತ್ತು ಜೋರಾಗಿ ಗಲಾಟೆ ಮಾಡುತ್ತಿದ್ದರು. ತಾಯಿ ಅವರ ಗೂಂಡಾಗಿರಿಯನ್ನು ವಿರೋಧಿಸಿದ್ದು, ಅವರು ಆಕೆಯ ಪ್ರಾಣ ಹೋಗುವವರೆಗೂ ಥಳಿಸಿದ್ದಾರೆ. ಇತ್ತ ತಾಯಿ ಸಾವನ್ನಪ್ಪಿದ ವಿಚಾರ ತಿಳಿಯುತ್ತಿದ್ದಂತೆಯೇ ನಾವು ಪೊಲೀಸರಿಗೆ ಮಾಹಿತಿ ನೀಡಿದೆವು. ಆದರೆ ಪೊಲೀಸರು ಬರುವ ಮೊದಲೇ ಅವರೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು ಎಂದಿದ್ದಾರೆ.