ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಅನ್ನು ಕುಡಿದ ಮತ್ತಿನಲ್ಲಿ ಚಲಾಯಿಸಿಕೊಂಡು ಹೋದ ಪ್ರಯಾಣಿಕ…

57
firstsuddi

ಬೀದರ್: ಪ್ರಯಾಣಿಕನೊಬ್ಬ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಅನ್ನು ಕುಡಿದ ಮತ್ತಿನಲ್ಲಿ ಚಲಾಯಿಸಿಕೊಂಡು ಹೋದ ಘಟನೆ ಜಿಲ್ಲೆಯ ಔರಾದ್ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಔರಾದ್ ತಾಲೂಕಿನ ಕರಂಜಿ ಗ್ರಾಮದ ಯಶಪ್ಪ ಸೂರ್ಯವಂಶಿ ಎನ್ನುವ ವ್ಯಕ್ತಿ ಬೆಳಗ್ಗೆಯಿಂದ ನಿಲ್ದಾಣದಲ್ಲಿ ಕುಳಿತರೂ ತನ್ನ ಊರಿಗೆ ಹೋಗಲು ಬಸ್ ಸಿಗದ ಕಾರಣ ಬೇಸತ್ತಿದ್ದಾನೆ. ನಂತರ ಎಷ್ಟು ಹೊತ್ತು ಕಾಯುತ್ತಾ ಕುಳಿತರೂ ಬಸ್ ಬರುವುದಿಲ್ಲವೆಂದು ಸಿಟ್ಟು ಮಾಡಿಕೊಂಡು ನಿಲ್ದಾಣದಲ್ಲಿ ನಿಂತಿರುವ ಬೇರೊಂದು ಮಾರ್ಗದ ಸಾರಿಗೆ ಬಸ್‌ನ್ನು ಹತ್ತಿ, ಚಲಾಯಿಸಿಕೊಂಡು ಹೋಗಿದ್ದಾನೆ.

ಕುಡಿದ ಮತ್ತಿನಲ್ಲಿ ಯಶಪ್ಪ ಬಸ್ ಚಲಾಯಿಸಿದ್ದು, ಬಸ್‍ನಲ್ಲಿರುವ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈತ ಬಸ್ಸನ್ನು ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಯಶಪ್ಪ ಸೂರ್ಯವಂಶಿ ಇಟಂಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ಬಸ್ ನಿಲ್ದಾಣಕ್ಕೆ ಬಂದು ಬಸ್ ಗಾಗಿ ಕಾದರೂ ಬಸ್ ಸಿಗದೆ ಸಾರಿಗೆ ಬಸ್ ಚಲಾಯಿಸಿದ್ದಾನೆ.

ಡಿವೈಡರ್ ಗೆ ಬಸ್ ಡಿಕ್ಕಿಯಾಗುತ್ತಿದ್ದಂತ್ತೆ ಯಶಪ್ಪ ಸೂರ್ಯವಂಶಿ ಓಡಿ ಹೋಗುವಾಗ ಸಾರ್ವಜನಿಕರ ಸಹಾಯದಿಂದ ಎಎಸ್‍ಐ ಸುನೀಲ್ ಕುಮಾರ್, ಆತನನ್ನು ಹಿಡಿದು ಔರಾದ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.