ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ – ನಾಲ್ವರ ಬಂಧನ…

83
firstsuddi

ಮಂಗಳೂರು : ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯ ಮುನೀಶ್ ತಿರ್ಕಿ(33), ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಜಯ್ ಸಿಂಗ್ (21) , ಮುಖೇಶ್ ಸಿಂಗ್(20), ಮುನೀಮ್ ಸಿಂಗ್ (20) ಎಂದು ಗುರುತಿಸಲಾಗಿದೆ.

ಪ್ರಕರಣದ ಹಿನ್ನಲೆ :
ನಗರದ ಹೊರವಲಯದ ಉಳಾಯಿಬೆಟ್ಟುವಿನ ಪರಾರಿ ಎಂಬಲ್ಲಿನ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ರಾಜ್ಯ ಹಾಗೂ ಹೊರ ರಾಜ್ಯದ ವಲಸೆ ಕಾರ್ಮಿಕರು ದುಡಿಯುತ್ತಿದ್ದರು. ಅವರಲ್ಲಿ ಮೃತ ಜಾರ್ಖಂಡ್ ಮೂಲದ ಬಾಲಕಿಯ ಕುಟುಂಬವೂ ವಾಸಿಸುತ್ತಿತ್ತು. ನ.21ರಂದು ಮಧ್ಯಾಹ್ನ 1.10ರ ಸುಮಾರಿಗೆ ಬಾಲಕಿ ತನ್ನ ಸಹೋದರ, ಸಹೋದರಿಯರೊಂದಿಗೆ ಫ್ಯಾಕ್ಟರಿ ಆವರಣದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಆರೋಪಿ ಜಯ ಸಿಂಗ್ ಬಾಲಕಿಯನ್ನು ತಮ್ಮ ಬಾಡಿಗೆ ಮನೆಯೊಳಗೆ ಕರೆದೊಯ್ದಿದ್ದಾನೆ.

ಮುನೀಶ್ ತಿರ್ಕಿ ಎಂಬಾತ ಯಾರಾದರೂ ಬರುತ್ತಾರೆಯೇ ಎಂದು ಹೊರಗಡೆಯಿಂದ ಗಮನಿಸಿದ್ದಾನೆ. ಇದಾದ ನಂತರ ಜಯ ಸಿಂಗ್, ಮುಖೇಶ್ ಸಿಂಗ್, ಮುನೀಮ್ ಸಿಂಗ್ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವದಿಂದ ಬಾಲಕಿ ಚೀರಾಡಲು ಆರಂಭಿಸಿದ್ದಾಳೆ. ಆಗ ಯಾರಿಗಾದರೂ ಗೊತ್ತಾಗುತ್ತದೆ ಎಂದು ಹೆದರಿದ ಆರೋಪಿಗಳು ಬಾಲಕಿಯನ್ನು ಕತ್ತು ಹಿಸುಕಿ ಕೊಲೆಗೈದು, ಬಾಲಕಿಯ ಮೃತದೇಹವನ್ನು ಅಲ್ಲಿಯೇ ಇದ್ದ ಮೋರಿಗೆ ಎಸೆದು ಏನೂ ಅರಿಯದವರಂತೆ ವರ್ತಿಸಲು ಆರಂಭಿಸಿದ್ದಾರೆ.

ನ.21ರಂದು ಮಧ್ಯಾಹ್ನ ಮಧ್ಯಾಹ್ನ 3ರ ಬಳಿಕ ಪೋಷಕರು ಬಾಲಕಿಯನ್ನು ಹುಡುಕಾಟ ನಡೆಸಲು ಆರಂಭಿಸಿದ್ದಾರೆ. ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ, ಬಾಲಕಿಯು ಪತ್ತೆಯಾಗಿರಲಿಲ್ಲ. ಆದರೆ, ಸಂಜೆ 6 ಗಂಟೆ ಹೊತ್ತಿಗೆ ಬಾಲಕಿಯ ಮೃತದೇಹ ರಾಜ್ ಟೈಲ್ಸ್ ಫ್ಯಾಕ್ಟರಿಯ ಮೋರಿಯಲ್ಲಿ ಪತ್ತೆಯಾಗಿತ್ತು. ತಕ್ಷಣ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಸಹಿತ ಮಂಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದರು.

ಪೊಲೀಸರು ಅಲ್ಲಿನ ಎಲ್ಲಾ ಕಾರ್ಮಿಕರನ್ನು ಬಂಧಿಸಿ ತನಿಖೆ ನಡೆಸಿದ್ದರು. ತನಿಖೆಯ ವೇಳೆ ಈ ನಾಲ್ವರ ಮೇಲೆ ಅನುಮಾನ ಹೆಚ್ಚಾಗಿ ತನಿಖೆ ನಡೆಸಿದಾಗ ಆರೋಪಿಗಳು ಕೃತ್ಯ ಎಸಗಿರುವುದನ್ನು ಬಾಯಿ ಬಿಟ್ಟಿದ್ದಾರೆ. ಸದ್ಯ ನಾಲ್ವರು ಆರೋಪಿಗಳ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ.