ಬೆಂಗಳೂರು : ಡ್ರಗ್, ಬಿಟ್ಕಾಯಿನ್ ಹಾಗೂ ಮನಿಲಾಂಡರಿಂಗ್ ಪ್ರಕರಣಗಳ ತನಿಖೆ ಮಾಡುತ್ತಿದ್ದೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ಡ್ರಗ್ಸ್ ಹಾಗೂ ಬಿಟ್ ಕಾಯಿನ್ ಹಗರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳಿದ್ದಾರೆ ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ತನಿಖಾಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯನವರು ಸಾಕ್ಷ್ಯ ಇಟ್ಟು ಮಾತಾಡಬೇಕು. ಅವರ ಬಳಿ ಸಾಕ್ಷಿ ಇದ್ದರೆ ಕೊಡಲಿ, ಅದನ್ನೂ ತನಿಖೆ ಮಾಡುತ್ತೇವೆ. ಸೂತ್ರವಿಲ್ಲದೆ ಗಾಳಿಪಟ ಬಿಡಬಾರದು ಎಂದು ವಿಪಕ್ಷ ನಾಯಕರಿಗೆ ಸಿಎಂ ಬೊಮ್ಮಾಯಿ ಟಾಂಗ್ ಕೊಟ್ಟರು.
ಕಳೆದ ಎರಡೂವರೆ ವರ್ಷದಿಂದ ಅತಿ ಹೆಚ್ಚು ಡ್ರಗ್ ಸೀಜ್ ಮಾಡಲಾಗಿದೆ. ಕಾನೂನಿನನ್ವಯ ಆರೋಪಿಗಳು ತಪ್ಪಿಸಿಕೊಳ್ಳದಂತೆ ಕೇಸ್ ಹಾಕಲಾಗಿದೆ. ಪ್ರಥಮ ಬಾರಿಗೆ ನಮ್ಮ ರಾಜ್ಯ ಡ್ರಗ್ ವಿರುದ್ಧ ದೊಡ್ಡ ಹೋರಾಟ ನಡೆಸಿದೆ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ ಜತೆಗೆ ಹ್ಯಾಕಿಂಗ್ ಮಾಡುತ್ತಿದ್ದ ಶ್ರೀಕೃಷ್ಣನನ್ನು ಬಂಧಿಸಲಾಗಿದೆ ಎಂದರು. 2018 ರ ಫೆಬ್ರವರಿಯಲ್ಲಿ ಶ್ರೀಕೃಷ್ಣ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ಕೇಸ್ ಫೈಲ್ ಆಗಿರುತ್ತದೆ. ಆತನ ಜತೆಯಿದ್ದ ಐದಾರು ಜನರ ಬಂಧನವಾಗುತ್ತದೆ. ಆದರೆ, ಶ್ರೀಕೃಷ್ಣನ ಬಂಧನ ಆಗಿರಲಿಲ್ಲ. ಆಗ ಯಾವ ಸರ್ಕಾರವಿತ್ತು ಅನ್ನೋದನ್ನ ಗಮನಿಸಿ. ಅವನಿಗೆ ನಿರೀಕ್ಷಣಾ ಜಾಮೀನುವರಗೆ ಅವಕಾಶ ಸಿಕ್ಕಿತ್ತು. ಅದಾದ ಮೇಲೆ ಆತನನ್ನು ಯುಬಿ ಸಿಟಿ ದಾಂಧಲೆಯಲ್ಲಿ ಬಂಧಿಸಿ ಸಂಪೂರ್ಣ ತನಿಖೆ ಮಾಡಬೇಕಾಗಿತ್ತು. ಇಂದು ನಮ್ಮ ಮೇಲೆ ಆರೋಪ ಮಾಡುವ ಗೂಬೆ ಕೂರಿಸುವ ಕಾಂಗ್ರೆಸ್ ನಾಯಕರು ಅಂದೇಕೆ ಆ ಕ್ರಮಕ್ಕೆ ಮುಂದಾಗಿರಲಿಲ್ಲ ಎಂದು ಸಿಎಂ ಪ್ರಶ್ನಿಸಿದ್ದಾರೆ.
ಶ್ರೀಕೃಷ್ಣನನ್ನು ಬಂಧಿಸಿ ಕೇಸುಗಳ ಬಗ್ಗೆ ಸರಿಯಾದ ತನಿಖೆಯನ್ನು ಬಿಜೆಪಿ ಸರ್ಕಾರದಲ್ಲಿ ಮಾಡಲಾಗುತ್ತಿದೆ. ಮೂರು ಕೇಸುಗಳನ್ನು ದಾಖಲಿಸಿ ತನಿಖೆ ನಡೆಸಿ ಆರೋಪಪಟ್ಟಿಯನ್ನು ಕೂಡ ಬಿಜೆಪಿ ಸರ್ಕಾರ ಸಲ್ಲಿಸಿದೆ. ಅಕ್ರಮ ಹಣ ವರ್ಗಾವಣೆ, ಹ್ಯಾಕಿಂಗ್ ಮತ್ತು ಡ್ರಗ್ ಕೇಸಿಗೆ ಸಂಬಂಧಪಟ್ಟಂತೆ ಕೇಸು ದಾಖಲಿಸಿದ್ದೇವೆ. ಇಡಿ, ಸಿಬಿಐಗೆ ಉಲ್ಲೇಖಿಸಿದೆ, ನಮ್ಮ ಸರ್ಕಾರ ಈ ವಿಷಯದಲ್ಲಿ ಸಂಧಾನ ಮಾಡುವ ಪ್ರಶ್ನೆಯೇ ಇಲ್ಲ, ಇಲ್ಲಿ ಅವ್ಯವಹಾರವಾಗಿದೆ ಎಂದು ಹೇಳುವ ವಿಪಕ್ಷ ನಾಯಕರು ಸಾಕ್ಷಿ, ಆಧಾರಗಳನ್ನು ನೀಡಲಿ ಎಂದು ಸಿಎಂ ಬೊಮ್ಮಾಯಿ ಒತ್ತಾಯಿಸಿದರು.










