ಬಿಟ್ ಕಾಯಿನ್ ಪಾರದರ್ಶಕ ತನಿಖೆಯಾದರೆ ನಮ್ಮ ರಾಜ್ಯಕ್ಕೆ ಬಿಜೆಪಿಯಿಂದ 3 ನೇ ಸಿಎಂ ಸಿಗಲಿದ್ದಾರೆ : ಪ್ರಿಯಾಂಕ್ ಖರ್ಗೆ.

64
firstsuddi

ಮೈಸೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ರೀತಿಯ ತನಿಖೆ ನಡೆಯುತ್ತಿಲ್ಲ. ಇಂದಿಗೂ ನಾನು ಅದನ್ನೇ ಹೇಳುತ್ತೇನೆ. ಬಿಟ್ ಕಾಯಿನ್ ಪಾರದರ್ಶಕ ತನಿಖೆಯಾದರೆ ನಮ್ಮ ರಾಜ್ಯಕ್ಕೆ ಬಿಜೆಪಿಯಿಂದ 3 ನೇ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.

ಪಿಎಸ್ಐ ಪರೀಕ್ಷೆ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಈಗ ಬಂಧನವಾಗಿರುವವರು ಕಿಂಗ್ ಪಿನ್ ಗಳಲ್ಲ ಕೇವಲ ಮಧ್ಯವರ್ತಿಗಳು. ಇವರಿಗೆ ಕೆಲಸ ವಹಿಸಿದ್ದು ಯಾರು? ದುಡ್ಡು ಯಾರಿಗೆ ಸಂದಾಯವಾಗಿದೆ? ಅನ್ನೋದು ಮುಖ್ಯ ನನಗೆ ಗೃಹ ಸಚಿವರ ಮೇಲೆಯೆ ಅನುಮಾನವಿದೆ. ಅಕ್ರಮ ನಡೆಯುತ್ತಿದೆ ಎಂದು ಗೊತ್ತಿದ್ದರೂ ಸುಮ್ಮನೆ ಕೂತಿದ್ದರು, ಅದರ ಅರ್ಥವೇನು? ಪ್ರಕರಣ ಸರಿಯಾಗಿ ತನಿಖೆಯಾದರೆ ಅದು ಸರ್ಕಾರಕ್ಕೆ ಸುತ್ತಿಕೊಳ್ಳುತ್ತದೆ ಎಂದಿದ್ದಾರೆ.

ಮರು ಪರೀಕ್ಷೆ ಮಾಡಬೇಕೆಂದಿರುವ ಸರ್ಕಾರ, 545 ಮಂದಿಯ ಓಎಂಆರ್ ಶೀಟ್ ತರಿಸಿಕೊಂಡಿದ್ದಾದರೂ ಯಾಕೆ?, ಇಲ್ಲಿ ಸರ್ಕಾರದ ದಡ್ಡತನ ಎದ್ದು ಕಾಣುತ್ತಿದ್ದೆ. 300 ಜನರು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಅವರೇ ಹೇಳಿದ್ದಾರೆ. ಆದರೆ ಸರ್ಕಾರ ಇಲ್ಲಿಯವರೆಗೆ ಎಷ್ಟು ಜನರನ್ನ ಅರೆಸ್ಟ್ ಮಾಡಿದೆ?. ಒಂದೆರಡು ಕಿಂಗ್ ಪಿನ್ ಸಿಕ್ಕರೆ ಅದರಲ್ಲೇ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಪ್ರಿಯಾಂಕ್ ಖರ್ಗೆ ಹಿಟ್ ಅಂಡ್ ರನ್ ವ್ಯಕ್ತಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ, ನಾನು ಹಿಟ್ ಅಂಡ್ ರನ್ ಆಗಿದ್ದರೆ ನಾನು ಧ್ವನಿ ಎತ್ತಿದ ಕೇಸ್ಗಳನ್ನೇಲ್ಲ ಏಕೆ ತನಿಖೆ ಮಾಡಿಸುತ್ತಿದ್ದೀರಿ? ನಾನು ಮುಖ್ಯ ಅಲ್ಲ ಅನ್ನೋದಾದರೆ ನನ್ನ ಮಾತಿಗೆ ಏಕೆ ಪ್ರಾಮುಖ್ಯತೆ ಕೊಡುತ್ತೀರಿ? ಬಿಟ್ಟುಬಿಡಿ ಎಂದು ಟಾಂಗ್ ನೀಡಿದ್ದಾರೆ.